ವರ್ಷದೊಳಗೆ ಅಂಬೇಡ್ಕರ್ ಭವನ ನಿರ್ಮಾಣವಾಗಲಿ: ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಪಟ್ಟಣದ ಬಹುದಿನಗಳ ಬೇಡಿಕೆಯಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇಂದಿನಿಂದ ಸರಿಯಾಗಿ ಒಂದು ವರ್ಷದ ಅವಧಿಯಲ್ಲಿ ಭವನ ನಿರ್ಮಾಣ ಕಾಮಗಾರಿ ಪೂರೈಸಲು ಏಜೆನ್ಸಿಯವರು ಕ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಅವರು ಶನಿವಾರ ಶಿರಹಟ್ಟಿ ಪಟ್ಟಣದಲ್ಲಿ 196.88 ಲಕ್ಷ ರೂ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣಗೊಳ್ಳಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಶಿರಹಟ್ಟಿ ಪಟ್ಟಣದಲ್ಲಿ ಶ್ರೀ ಜ. ಫಕೀರೇಶ್ವರ ಸಂಸ್ಥಾನ ಮಠಕ್ಕೆ ರಾಜ್ಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ರಸ್ತೆಯ ಬಗ್ಗೆ ಜ.ಫ. ಸಿದ್ದರಾಮ ಸ್ವಾಮೀಜಿಗಳು ಪ್ರಸ್ತಾಪಿಸಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೂ ಚರ್ಚೆ ನಡೆಸುವ ಭರವಸೆಯನ್ನು ನೀಡಿದ್ದೇನೆ ಎಂದರಲ್ಲದೆ, ಜಿಲ್ಲೆಯಲ್ಲಿ ಸಮುದಾಯ ಭವನಗಳಿಗೆ ಅಗತ್ಯವಿರುವ ನಿವೇಶನಗಳ ಕುರಿತು ಸಂಪೂರ್ಣ ವಿವರವನ್ನು ನೀಡಬೇಕೆಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು. ಶಿರಹಟ್ಟಿ ಪಟ್ಟಣದಲ್ಲಿ ನ್ಯಾಯಾಲಯ ನಿರ್ಮಾಣಕ್ಕೆ ಹೈಕೋರ್ಟ್ ನ್ಯಾಯಾಧೀಶರೊಂದಿಗೆ ಚರ್ಚಿಸಲಾಗುವುದು ಎಂದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಪ.ಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ ಸನದಿ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಎಸ್.ಎನ್. ಬಳ್ಳಾರಿ, ಮುತ್ತುರಾಜ ಭಾವಿಮನಿ, ಡಿ.ಕೆ. ಹೊನ್ನಪ್ಪನವರ, ಮಂಜುನಾಥ ಘಂಟಿ, ಸಂತೋಷ ಕುರಿ, ಸಂದೀಪ ಕಪ್ಪತ್ತನವರ, ಅಜ್ಜು ಪಾಟೀಲ, ಜಾನು ಲಮಾಣಿ, ಸಂತೋಷ ಕುರಿ, ತಿಪ್ಪಣ್ಣ ಕೊಂಚಿಗೇರಿ, ಮೋಹನ ಗುತ್ತೆಮ್ಮನವರ, ರವಿ ಗುಡಿಮನಿ, ರಂಗಪ್ಪ ಗುಡಿಮನಿ, ಪ್ರಕಾಶ ಗುಡಿಮನಿ, ಸಿಪಿಐ ನಾಗರಾಜ ಮಾಢಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರ, ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ, ನಿರ್ಮಿತಿ ಕೇಂದ್ರದ ವಿಜಯ ಯಳಮಲಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಸಚಿವ ಎಚ್.ಕೆ. ಪಾಟೀಲ ಶಿರಹಟ್ಟಿಯ ಶ್ರೀ ಜ. ಫಕೀರೇಶ್ವರ ಸಂಸ್ಥಾನ ಮಠಕ್ಕೆ ತೆರಳಿ ಕರ್ತೃ ಗದ್ದುಗೆಯ ದರ್ಶನ ಪಡೆದು, ಜ.ಫ. ಸಿದ್ದರಾಮ ಸ್ವಾಮೀಜಿ ಮತ್ತು ಉತ್ತರಾಧಿಕಾರಿ ಜ.ಫ. ದಿಂಗಾಲೇಶ್ವರ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದುಕೊಂಡರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ನಿರ್ಮಿತಿ ಕೇಂದ್ರದಿಂದ ಈಗಾಗಲೇ ನಿರ್ಮಾಣವಾಗಿರುವ ಸಮುದಾಯ ಭವನಗಳಲ್ಲಿ ಮಾತನಾಡುವಾಗ ಪ್ರತಿಧ್ವನಿಸುತ್ತಿರುವುದರಿಂದ ಕಾರ್ಯಕ್ರಮವನ್ನು ಹೊರಗಡೆ ಮಾಡುವ ಪರಿಸ್ಥಿತಿ ಬಂದಿದೆ. ಶಿರಹಟ್ಟಿಯಲ್ಲಿಯ ಮಹರ್ಷಿ ವಾಲ್ಮೀಕಿ ಭವನವೂ ಇದೇ ಸಮಸ್ಯೆ ಎದುರಿಸುತ್ತಿದೆ. ತಜ್ಞ ಆರ್ಕಿಟೆಕ್ಚರ್ ಸಲಹೆ ಮೇರೆಗೆ ಸುಸಜ್ಜಿತ ಭವನ ನಿರ್ಮಿಸಬೇಕು. ನ್ಯಾಯಾಲಯಕ್ಕೆ ಸೂಕ್ತ ಜಮೀನು ಒದಗಿಸಬೇಕು, ಶಿರಹಟ್ಟಿ ಪಟ್ಟಣದಲ್ಲಿ ಹೆಸ್ಕಾಂ ಉಪವಿಭಾಗ ಸ್ಥಾಪಿಸಬೇಕು, ಶ್ರೀ ಜ.ಫಕೀರೇಶ್ವರ ಮಠಕ್ಕೆ 22 ಕೋಟಿ ರೂ ವೆಚ್ಚದಲ್ಲಿ ರಿಂಗ್ ರೋಡ್ ನಿರ್ಮಿಸುವುದಕ್ಕೆ ಅನುದಾನ ಒದಗಿಸಬೇಕೆಂದು ಸಚಿವ ಎಚ್.ಕೆ. ಪಾಟೀಲರಲ್ಲಿ ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here