ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯರನ್ನು ಗುಲಾಮರನ್ನಾಗಿ ಮಾಡಿದವರನ್ನು ನಾವು ನೊಡಿದ್ದೇವೆ, ಆದರೆ ಗುಲಾಮರನ್ನು ರಾಜ ಮಹಾ ರಾಜರನ್ನಾಗಿಸಿದವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತದಾರ್ ಹೇಳಿದರು.
ನಗರದ ಆದರ್ಶ ಶಿಕ್ಷಣ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದ ಸಿಲ್ವರ್ ಜುಬ್ಲಿ ಸಭಾಂಗಣದಲ್ಲಿ ಕನ್ನಡ-ಸಂಸ್ಕೃತಿ ಇಲಾಖೆ, ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಓದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡುವಲ್ಲಿ ಹಾಗೂ ಪ್ರಬುದ್ಧ ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ ಅವಿಸ್ಮರಣೀಯ. ತಮ್ಮೆಲ್ಲರಿಗೂ ವಿದ್ಯಾಭ್ಯಾಸ, ಶಿಕ್ಷಣ, ಓದು ಎಷ್ಟು ಮುಖ್ಯ ಎಂಬುದನ್ನು ಡಾ. ಅಂಬೇಡ್ಕರ್ ಅವರನ್ನು ನೋಡಿ ಅರಿಯಬೇಕಿದೆ. ಓದಬೇಕು, ಓದಿದ್ದನ್ನು ಅರ್ಥ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಸಾಧನೆ ಮಾಡಲು ಇಚ್ಛಾಶಕ್ತಿ ಬೇಕು, ಇಚ್ಛಾಶಕ್ತಿ ಇದ್ದಲ್ಲಿ ಸಾಧನೆ ಸಾಧ್ಯ ಎಂದು ಹೇಳಿದರು.
ಭಾರತದ ದಿವ್ಯ ಚೇತನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಎಂಬ ಸ್ವರಚಿತ ಗೀತೆ ಹಾಡುವ ಮೂಲಕ ನೆರೆದ ವಿದ್ಯಾರ್ಥಿಗಳಿಗೆ ಸಂವಿಧಾನ ಓದಿನ ಕುರಿತು ಮಹೇಶ್ ಪೋತದಾರ್ ಅರಿವು ಮೂಡಿಸಿದರು.
ಹುಲಕೋಟಿ ಜಿಸಿಟಿಎಂ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರ್ಜುನ್ ಗೋಳಸಂಗಿ ವಿಶೇಷ ಉಪನ್ಯಾಸ ನೀಡುತ್ತಾ, ಸಮತಾ ಭಾರತ ನಿರ್ಮಾಣ ಆಗಬೇಕಿದೆ. ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದರ್ಶ ಶಿಕ್ಷಣ ಸಮಿತಿ ಅಧ್ಯಕ್ಷರಾದ ಕೆ.ವಿ. ಕುಷ್ಟಗಿ ವಹಿಸಿದ್ದರು. ಆದರ್ಶ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಕೆ. ಗಿರಿರಾಜಕುಮಾರ್ ಸಂವಿಧಾನದ ಪ್ರಸ್ತಾವನೆಯನ್ನು ಓದಿಸಿದರು.
ವೇದಿಕೆಯಲ್ಲಿ ಆದರ್ಶ ವಾಣಿಜ್ಯ ಮಹಾವಿದ್ಯಾಲಯದ ಕೋ ಆರ್ಡಿನೇಟರ್ ಹಾಗೂ ಉಪಪ್ರಾಚಾರ್ಯ ಡಾ. ವಿ.ಟಿ. ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಹಾಜರಿದ್ದರು.
ಗದಗ ದಲಿತ ಕಲಾ ಮಂಡಳಿ ಅಧ್ಯಕ್ಷ ಶರೀಫ್ ಬೆಳೆಯಲಿ ಹಾಗೂ ಸಂಗಡಿಗರು ಅಂಬೇಡ್ಕರ್ ಕುರಿತು ಗೀತೆಗಳನ್ನು ಪ್ರಸ್ತುತಪಡಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಕುರಿತು ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಆಶುಭಾಷಣ, ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಜರಗಿತು. ಆದರ್ಶ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ಬಿ.ಪಿ. ಜೈನ್ ಕಾರ್ಯಕ್ರಮ ನಿರ್ವಹಿಸಿದರು.
**ಬಾಕ್ಸ್**
ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಮಾತನಾಡಿ, ಸ್ವಾಭಿಮಾನ, ನಮ್ಮತನಗಳನ್ನು ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗೋಣ. ಸಂವಿಧಾನ ಓದು ಕಾರ್ಯಕ್ರಮವು ಸಂವಿಧಾನದ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವುದಾಗಿದೆ. ಸಂವಿಧಾನ ನಮ್ಮೆಲ್ಲರಿಗೂ ಶ್ರೇಷ್ಠ ಎಂಬುದನ್ನು ಅರಿತು ಸಮಸಮಾಜ ನಿರ್ಮಿಸಲು ಮುಂದಾಗೋಣ ಎಂದು ಹೇಳಿದರು.