ಬೆಂಗಳೂರು:- ಸಿಗ್ನಲ್ ನಲ್ಲಿ ನಿಂತಿದ್ದ ಬೈಕ್ ಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಗಂಡ ಹೆಂಡತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್‌ನ ಸಂಗೀತ ಸಿಗ್ನಲ್ ಬಳಿ ಜರುಗಿದೆ.
ಪತಿ ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನು ಮೃತರು. ಘಟನೆಯಲ್ಲಿ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ರೆಡ್ ಸಿಗ್ನಲ್ ಇದ್ದ ಕಾರಣ ಸವಾರ ಬೈಕ್ ನಿಲ್ಲಿಸಿದ್ದರು. ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಅಂಬುಲೆನ್ಸ್ ಹಿಂದಿನಿಂದ ಬೈಕ್‌ಗೆ ಗುದ್ದಿದೆ. ಬೈಕ್ ಸಮೇತ 200 ಮೀಟರ್ ಎಳೆದೊಯ್ದಿದೆ. ಕೊನೆಗೆ ಪೊಲೀಸ್ ಚೌಕ್ ಹಾಗೂ ಸಿಗ್ನಲ್ ಕಂಡ್ರೋಲ್ ಯುನಿಟ್‌ಗೆ ಗುದ್ದಿ ಅಂಬುಲೆನ್ಸ್ ನಿಂತಿದೆ. ಪರಿಣಾಮ ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನು ಸಾವನ್ನಪ್ಪಿದ್ದಾರೆ.
ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ಚಾಲಕನಿಂದ ಅಪಘಾತವಾಗಿದೆ. ಅಂಬುಲೆನ್ಸ್ ಒಳಗೆ ಯಾರೂ ರೋಗಿ ಇರಲಿಲ್ಲ. ಆದರೂ, ಅತಿವೇಗವಾಗಿ ಬಂದು ಸಿಗ್ನಲ್ ಇದ್ದರೂ ಬ್ರೇಕ್ ಹಾಕದೇ ಅಪಘಾತವೆಸಗಿದ್ದಾನೆ. ಅಪಘಾತ ಸ್ಥಳದಲ್ಲಿ ಸ್ಥಳೀಯರ ಆಕ್ರೋಶ ಹೊರಹಾಕಿ ಅಂಬುಲೆನ್ಸ್ ಅನ್ನು ಪಲ್ಟಿ ಹೊಡೆಸಿದ್ದಾರೆ. ಈ ಏರಿಯಾದಲ್ಲಿ ಅಂಬುಲೆನ್ಸ್ ಅಪಘಾತ ಎರಡನೇ ಸಲ ಆಗಿರೋದು. ಯಾರು ಕೂಡ ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಬರ್ತಾರೆ. ಇವರಿಂದ ಇಬ್ಬರ ಪ್ರಾಣ ಹೋಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಂಬುಲೆನ್ಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.


