ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ: ಡಿ.10ರಂದು ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೊಂದಿಗಿನ ಒಡನಾಟದ ಕುರಿತು ಗುರುವಾರ ಸದಸನದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್, ಎಸ್.ಎಂ. ಕೃಷ್ಣರನ್ನು ಆಧುನಿಕ ಕರ್ನಾಟಕ ನಿರ್ಮಾಣದ ಮಹಾಶಿಲ್ಪಿ ಎಂದು ಬಣ್ಣಿಸಿದರು.
ನಾನು ರಾಜಕೀಯವಾಗಿ ಗುರುತಿಸಿಕೊಂಡಿದ್ದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಜೊತೆಗೆ. ಬಂಗಾರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡಿದ ನಂತರ ನನ್ನನ್ನು ಎಸ್.ಎಂ. ಕೃಷ್ಣ ಅವರ ಬಳಿ ಹೋಗುವಂತೆ ಸೂಚಿಸಿದರು. ಅಂದಿನಿಂದ ಎಸ್.ಎಂ. ಕೃಷ್ಣ ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ನನ್ನ ಬೆಳವಣಿಗೆಗೆ ಕಾರಣರಾದರು. ನಂತರ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಸಂಬಂಧ ಬೆಳೆಯಿತು.
92 ವರ್ಷಗಳ ತುಂಬು ಜೀವನ ಸಾಗಿಸಿ ಎಸ್.ಎಂ. ಕೃಷ್ಣ ನಿಧನರಾಗಿದ್ದಾರೆ. ವಿವೇಕಾನಂದರ ವಾಣಿಯಂತೆ, ಸಾಧನೆ ಇಲ್ಲದೆ ಸಾಯುವುದು ಸಾವಿಗೆ ಅವಮಾನ, ಆದರ್ಶ ಇಲ್ಲದೇ ಬದುಕುವುದು ಬದುಕಿಗೆ ಅವಮಾನ. ರಾಜ್ಯದ ಅಭಿವೃದ್ಧಿಗೆ ಎಸ್.ಎಂ. ಕೃಷ್ಣ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಬೃಹತ್ ಸಾಕ್ಷಿಗಳು ನಮ್ಮ ಕಣ್ಮುಂದಿದೆ.
ದೇಶಕ್ಕೆ ಮಾದರಿಯಾದ ಐಟಿ ನೀತಿ, ಜಿಲ್ಲಾ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಬೇಲೂರು ಘೋಷಣೆ, ರೈತರಿಗೆ ಶ್ರೀಗಂಧ ಬೆಳೆಯಲು ಅವಕಾಶ, ಕರ್ನಾಟಕ ರಾಜ್ಯ ಪಾನೀಯ ನಿಗಮ ಸ್ಥಾಪನೆ, ಮಧ್ಯಾಹ್ನದ ಬಿಸಿಯೂಟ, ಬೆಂಗಳೂರು ಮೆಟ್ರೋ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಹಲವು ಮಹತ್ತರ ಸಾಧನೆಗಳಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕಾರಣೀಕರ್ತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಂತ, ವಿಕಾಸ ಹಾಗೂ ಉದ್ಯೋಗ ಸೌಧಗಳನ್ನು ಸಹ ನಿರ್ಮಿಸಿದರು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಹೇಳಿದರು.