ಹೈನೋದ್ಯಮದ ಆಶಾಕಿರಣ `ಅಮೃತ-ಸುರಭಿ’

0
Spread the love

ಮಹಿಳೆಯರ ಆರ್ಥಿಕ ಮತ್ತು ಸಮಾಜಿಕ ಸಬಲೀಕರಣದ ಕನಸಿನೊಂದಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಡಿ ಸ್ಥಾಪಿಸಲಾಗಿರುವ `ಸಂಜೀವಿನಿ’ ಯೋಜನೆಯ ಒಕ್ಕೂಟಗಳು ಕಳೆದ ಹತ್ತು ವರ್ಷಗಳಿಂದ ಗದಗ ಜಿಲ್ಲೆಯಲ್ಲಿ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಪರಿವರ್ತನೆಯನ್ನು ತರುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿವೆ. ವಿವಿಧ ಜೀವನೋಪಾಯ ಚಟುವಟಿಕೆಗಳಿಗೆ ವಿಫುಲವಾದ ಅವಕಾಶಗಳನ್ನು ಸೃಷ್ಟಿಸಿ ಮಹಿಳೆಯರ ಬದುಕನ್ನು ಹಸನುಗೊಳಿಸಲು ಒಕ್ಕೂಟಗಳು ನಿರಂತರವಾಗಿ ಶ್ರಮಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಗದಗ ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಒತ್ತು ನೀಡಿ, ಒಂದು ಸಾವಿರಕ್ಕೂ ಹೆಚ್ಚು ಸ್ವ-ಸಹಾಯ ಗುಂಪಿನ ಸದಸ್ಯರಿಗೆ ರಾಸುಗಳ ಖರೀದಿಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಸದ್ದಿಲ್ಲದೆ ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ನಾಂದಿ ಹಾಡಲಾಗುತ್ತಿದೆ.

Advertisement

ಗದಗ ಜಿಲ್ಲೆಯಲ್ಲಿ ಬಹುತೇಕ ಮಳೆಯಾಶ್ರಿತ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತಾಪಿ ವರ್ಗಕ್ಕೆ ಕೃಷಿಯ ನಂತರದ ಸ್ಥಾನ ಹೈನುಗಾರಿಕೆಗೆ. ಹೈನೋತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದ ಉತ್ಪನ್ನಗಳನ್ನು ಕುಟುಂಬದ ಉಪಭೋಗಕ್ಕೆ ಬಳಸಿಕೊಳ್ಳುವುದರ ಜೊತೆಗೆ, ಇವುಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಂಡ ಹಲವಾರು ಕುಟುಂಬಗಳನ್ನು ನಾವು ಹಳ್ಳಿಗಳಲ್ಲಿ ನೋಡಬಹುದಾಗಿದೆ. ಹೀಗಾಗಿ ಹೈನುಗಾರಿಕೆ ಎನ್ನುವುದು ಗ್ರಾಮೀಣ ಜನರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಬದುಕಿನ ಜೀವನಾಡಿ ಎನ್ನಬಹುದು.

ಹೆಚ್ಚು ರಾಸುಗಳನ್ನು ಸಾಕಿ, ಹೈನೋದ್ಯಮದ ಮೂಲಕ ಜೀವನಮಟ್ಟವನ್ನು ಸುಧಾರಿಸಿಕೊಳ್ಳುವ ತವಕದಲ್ಲಿರುವ ಅದೆಷ್ಟೋ ಕುಟುಂಬಗಳಿಗೆ ಸುಲಭವಾಗಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುವುದು ಕಷ್ಟವೇ ಸರಿ. ಈ ಹಿನ್ನೆಲೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಆಸಕ್ತಿಯುಳ್ಳ ಅರ್ಹ ಮಹಿಳೆಯರನ್ನು ಗುರುತಿಸಿ, ಅವರಿಗೆ ಸಾಲ ಸೌಲಭ್ಯ ನೀಡಿ, ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಬೇಕು ಎಂಬ ಉದ್ದೇಶದೊಂದಿಗೆ `ಅಮೃತ-ಸುರಭಿ’ ಎನ್ನುವ ಯೋಜನೆಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದ ತಂಡ ಸಿದ್ಧಪಡಿಸಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ.

ಹೈನೋದ್ಯಮ ಅಭಿವೃದ್ಧಿಪಡಿಸಲು ಗದಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಳೆದ ವರ್ಷ ಆಗಸ್ಟ್-2024ರಲ್ಲಿ ಯೋಜನೆಯನ್ನು ರೂಪಿಸಿ, ಜಿಲ್ಲೆಯಲ್ಲಿ 1000 ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎನ್ನುವ ಮಹಾತ್ವಾಕಾಂಕ್ಷೆ ಯೋಜನೆಯೊಂದನ್ನು ಸಂಜೀವಿನಿ-ಎನ್.ಆರ್.ಎಲ್.ಎಮ್ ಯೋಜನೆಯ ಮೂಲಕ ಸಿದ್ಧಪಡಿಸಿ ಇದನ್ನು ಸಾಧಿಸಲು ಜನೆವರಿ-2025ವರೆಗೆ ಸಮಯಾವಕಾಶ ನೀಡಲಾಗಿತ್ತು.

ಆರಂಭದಲ್ಲಿ ಹೈನುಗಾರಿಕೆ ಮಾಡಲು ಆಸಕ್ತರಿರುವ ಸ್ವ-ಸಹಾಯ ಗುಂಪಿನ ಮಹಿಳೆಯರನ್ನು ಗುರುತಿಸಲಾಯಿತು. ಹಸು ಅಥವಾ ಎಮ್ಮೆಗಳನ್ನು ಕೊಂಡುಕೊಳ್ಳಲು ಇವರಿಗೆ ಸಂಜೀವಿನಿ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ (ಎನ್.ಆರ್.ಎಲ್.ಎಮ್) ಸ್ಥಾಪಿಸಲಾದ ಗ್ರಾ.ಪಂ ಮಟ್ಟದ ಒಕ್ಕೂಟಗಳ ಮೂಲಕ ಮತ್ತು ಅಗತ್ಯವಿದ್ದಲ್ಲಿ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯವನ್ನು ಕಲ್ಪಿಸಲು ಪೂರ್ವತಯಾರಿ ಮಾಡಿಕೊಳ್ಳಲಾಯಿತು.

ಅದರಂತೆ ತಾಲೂಕುವಾರು ಮತ್ತು ಗ್ರಾಮ ಪಂಚಾಯತವಾರು ಗುರಿ ನಿಗದಿಪಡಿಸಿ ಆರು ತಿಂಗಳ ಒಳಗಾಗಿ ಒಂದು ಸಾವಿರ ಕುಟುಂಬಗಳಿಗೆ ಹೈನುಗಾರಿಕೆಗೆ ಅವಕಾಶ ಕಲ್ಪಿಸುವ `ಅಮೃತ-ಸುರಭಿ’ ಯೋಜನೆಗೆ ಚಾಲನೆ ನೀಡಲಾಯಿತು. ನಂತರ ಹೊಸದಾಗಿ ಹೈನುಗಾರಿಕೆ ಪ್ರಾರಂಭಿಸಿರುವ ಮತ್ತು ಹೈನುಗಾರಿಕೆ ವಿಸ್ತರಣೆ ಮಾಡಿಕೊಂಡಿರುವ ಕುಟುಂಬಗಳೆಷ್ಟು, ಎಷ್ಟು ರಾಸುಗಳನ್ನು ಖರೀದಿಸಲಾಯಿತು, ಎಷ್ಟು ಸಾಲ ಸೌಲಭ್ಯ ಕಲ್ಪಿಸಲಾಗಿದೆ, ಇನ್ನೂ ಎಷ್ಟು ಕುಟುಂಬಗಳನ್ನು ತಲುಪಬೇಕು ಮತ್ತು ಹಾಲು ಉತ್ಪನ್ನದಲ್ಲಾದ ಹೆಚ್ಚಳವೆಷ್ಟು ಎನ್ನುವ ಹಲವಾರು ಸಂಗತಿಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸಿ, ಪ್ರತಿ ತಿಂಗಳೂ ಪ್ರಗತಿ ಪರಿಶೀಲನೆ ಮಾಡುತ್ತಾ ಹೋಗಲಾಯಿತು. ಇದರಿಂದಾಗಿ ಆರು ತಿಂಗಳಲ್ಲಿ 1029 ಕುಟುಂಬಗಳಿಗೆ ಹೈನುಗಾರಿಕೆ ಕಲ್ಪಿಸುವಲ್ಲಿ ಯಶಸ್ಸನ್ನು ಕಾಣಲಾಯಿತು.

ಯೋಜನೆಯ ಒಂದು ಪ್ರಯತ್ನದಿಂದಾಗಿ ಇಂದು ಗದಗ ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಇಂಬು ದೊರೆತಂತಾಗಿದೆ. ಈ ಯೋಜನೆಯ ಅನುಷ್ಠಾನದಿಂದಾಗಿ ಗದಗ ಜಿಲ್ಲೆಯಲ್ಲಿ ಒಟ್ಟು 1029 ಕುಟುಂಬಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಈ ಪೈಕಿ ಗ್ರಾ.ಪಂ ಒಕ್ಕೂಟದ ಮೂಲಕ ಸಮುದಾಯ ಬಂಡವಾಳ ನಿಧಿ ರೂ. 4.99 ಕೋಟಿ ಹಾಗೂ ಬ್ಯಾಂಕ್ ಮೂಲಕ ರೂ. 1.66 ಕೋಟಿಗಳಷ್ಟು ಸೇರಿದಂತೆ ಒಟ್ಟು ರೂ. 6.64 ಕೋಟಿ ಸಾಲವನ್ನು ಪಡೆದುಕೊಂಡಿದ್ದು, ಒಟ್ಟು 1256 ರಾಸುಗಳನ್ನು ಖರೀದಿಸಿರುತ್ತಾರೆ. ಇದರಿಂದಾಗಿ ಪ್ರತಿ ದಿನ ಸರಾಸರಿ 3,975 ಲೀಟರ್‌ನಷ್ಟು ಹಾಗೂ ಪ್ರತಿ ತಿಂಗಳು 1,19,250 ಲೀಟರ್‌ನಷ್ಟು ಹಾಲು ಉತ್ಪನ್ನವಾಗುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಈ ಕುಟುಂಬಗಳು ಪ್ರತಿ ತಿಂಗಳು ಒಟ್ಟು ರೂ.35.77 ಲಕ್ಷ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ.

“ಹೈನುಗಾರಿಕೆ ಮಾಡುವ ಕನಸಿತ್ತು. ಸಂಜೀವಿನಿ ಒಕ್ಕೂಟ 50 ಸಾವಿರ ರೂಪಾಯಿ ಸಾಲ ನೀಡಿ ನನಗೆ ಸಹಾಯ ಮಾಡಿತು. ಒಂದು ಆಕಳ ಖರೀದಿ ಮಾಡಿ ಹೈನುಗಾರಿಕೆ ಪ್ರಾರಂಭಿಸಿದೆ. ಒಟ್ಟು 1.5 ಲಕ್ಷ ರೂಗಳ ಸಾಲ ಪಡೆದು ಮೂರು ಹಸುಗಳನ್ನು ಖರೀದಿಸಿದೆ. ಇದರಿಂದ ದಿನಾಲು 16 ಲೀಟರ್ ಹಾಲು ಉತ್ಪನ್ನಗಾಗುತ್ತಿದ್ದು, ನನ್ನ ಕಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅನುಕೂಲವಾಯಿತು”

-ವಿಜಲಕ್ಷ್ಮೀ ಪಾಟೀಲ್.

ಸ್ವ-ಸಹಾಯ ಗುಂಪಿನ ಮಹಿಳೆ, ಗೋಜನೂರು ಗ್ರಾಮ.

“ಮಳೆಯಾಶ್ರಿತ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತ ಕುಟುಂಬಗಳಿಗೆ ಹೈನುಗಾರಿಕೆ ಪ್ರೋತ್ಸಾಹಿಸಲು, ಜನೆವರಿ-2025ರೊಳಗಾಗಿ ಜಿಲ್ಲೆಯಲ್ಲಿ ಒಟ್ಟು 1000 ಕುಟುಂಬಗಳಿಗೆ ಹೈನುಗಾರಿಕೆಗೆ ವಿಸ್ತರಿಸುವ ಉದ್ದೇಶದೊಂದಿಗೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಅಮೃತ ಸುರಭಿ ಯೋಜನೆ ಪ್ರಾರಂಭಿಸಲಾಯಿತು. ಕೇವಲ ಆರು ತಿಂಗಳುಗಳಲ್ಲಿ 6.64 ಕೋಟಿ ರೂ.ಗಳ ಸಾಲವನ್ನು ಗ್ರಾ.ಪಂ ಮಟ್ಟದ ಒಕ್ಕೂಟಗಳು ಮತ್ತು ಬ್ಯಾಂಕ್‌ಗಳಿಂದ ಮೂಲಕ ಸಾಲ ಸೌಲಭ್ಯ ಒದಗಿಸುವುದರ ಮೂಲಕ ಹಣಕಾಸಿನ ನೆರವು ನೀಡಲು ಕ್ರಮ ಕೈಗೊಳ್ಳಲಾಯಿತು. ಅಮೃತ ಸುರಭಿ ಯೋಜನೆಯ ಯಶಸ್ವಿ ಅನುಷ್ಠಾನದಿಂದ ಪ್ರೇರೇಪಣೆಗೊಂಡು, ಪ್ರಸಕ್ತ ಆರ್ಥಿಕ ವರ್ಷದಲ್ಲೂ ಸಹ 3500 ಕುಟುಂಬಗಳಿಗೆ ಹೈನುಗಾರಿಕೆ ವಿಸ್ತರಿಸಲು ಗುರಿ ಹೊಂದಲಾಗಿದೆ”

– ಭರತ್.ಎಸ್.

ಜಿ.ಪಂ ಸಿಇಓ, ಗದಗ.


Spread the love

LEAVE A REPLY

Please enter your comment!
Please enter your name here