ವಿಜಯಸಾಕ್ಷಿ ಸುದ್ದಿ, ಗದಗ: ಪಾಲಕ-ಪೋಷಕರಿಲ್ಲದ ಮಕ್ಕಳನ್ನು ಪೋಷಿಸಿ ಮಕ್ಕಳಿಲ್ಲದ ದಂಪತಿಗೆ ದತ್ತು ನೀಡುವ ಕಾರ್ಯದಲ್ಲಿ ತನ್ನನ್ನು ಸಮರ್ಪಿಸಿಕೊಂಡಿರುವ ಸೇವಾ ಭಾರತಿ ಸಂಸ್ಥೆಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯ ನಿಜಕ್ಕೂ ಅಮೂಲ್ಯವಾದದ್ದು ಎಂದು ನೇತ್ರತಜ್ಞ ಡಾ. ವಿಜಯಕುಮಾರ ಸಜ್ಜನರ ಹೇಳಿದರು.
ಅವರು ಶುಕ್ರವಾರ ಬೆಟಗೇರಿಯ ಸೇವಾ ಭಾರತಿ ಸಂಸ್ಥೆಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಈರ್ವರು ಮಕ್ಕಳನ್ನು ಮಕ್ಕಳಿಲ್ಲದ ಮುಂಬಯಿ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ದಂಪತಿಗಳಿಗೆ ದತ್ತುಪೂರ್ವ ಪೋಷಕತ್ವದಡಿ ಕಾನೂನುರೀತ್ಯಾ ಹಸ್ತಾಂತರಿಸಿ ಮಾತನಾಡಿದರು.
ಮಕ್ಕಳಿಲ್ಲದ ದಂಪತಿಗಳ ಪಾಡು ಮಾನಸಿಕ ಹಿಂಸೆ ನೀಡುವಂತದ್ದು, ಸೂಕ್ಷ್ಮ ಮತ್ತು ಸಂವೇದನಾಶೀಲ ದಂಪತಿಗಳಿಗಂತೂ ಇದು ತೀವ್ರ ನೋವನ್ನುಂಟು ಮಾಡುವ ಸಂಗತಿಯಾಗಿದೆ. ಮಾನಸಿಕವಾಗಿ ನೋಂದಿರುವ ದಂಪತಿಗೆ ಕಾನೂನು ಪ್ರಕಾರ ದತ್ತು ನೀಡುವ ಮೂಲಕ ಅಂತಹ ದಂಪತಿಗಳ ಬದುಕಿನಲ್ಲಿ ಹೊಸ ಚೈತನ್ಯ ತುಂಬುವ ಕಾರ್ಯ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ನಮೃತಾ ಸಜ್ಜನರ ಮಾತನಾಡಿ, ದಂಪತಿಗೆ ದೇವರು ಕರುಣಿಸುವ ವರವೇ ಸಂತಾನ ಭಾಗ್ಯ. ದಂಪತಿಗಳಲ್ಲಿ ಯಾವುದೇ ನ್ಯೂನತೆ ಇಲ್ಲದಿದ್ದರೂ ಸಹ ಮಕ್ಕಳಾಗದೇ ದಂಪತಿಗಳು ಅನುಭವಿಸುವ ನೋವು ಹೇಳಲಾಗದು. ಒಂದೆಡೆ ಬೇಡವಾದ ಮಗು, ಇನ್ನೊಂದೆಡೆ ಬೇಕಾದ ಮಗು ಇವೆರಡನ್ನೂ ಸರಿದೂಗಿಸಿಕೊಂಡು ಪರಿತ್ಯಕ್ತ ಮಗುವನ್ನು ಪೋಷಿಸಿ ಮಕ್ಕಳಿಲ್ಲದ ದಂಪತಿಗೆ ಕಾನೂನಿನ ಅಡಿಯಲ್ಲಿ ದತ್ತು ನೀಡುತ್ತಿರುವ ಸಂಸ್ಥೆಯ ಸೇವೆ ಅಭಿನಂದನೀಯ ಎಂದರು.
ಅತಿಥಿಯಾಗಿ ಗದಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜಯದೇವಿ ಕವಲೂರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಮೇಶ ಕಳ್ಳಿಮನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ವಹಿಸಿದ್ದರು.
ಮಗುವನ್ನು ದತ್ತು ಪಡೆದ ಅಪೂರ್ಬ ಹಾಗೂ ಬಾಬಾಸಾಹೇಬ ದಂಪತಿಗಳು ಮಾತನಾಡಿ, ದೇವರು ವರ ಪ್ರಸಾದವಾಗಿ ಕರುಣಿಸಿದ ಈ ಮಗುವಿಗೆ ಉತ್ತಮ ಸಂಸ್ಕಾರ, ಒಳ್ಳೆಯ ಶಿಕ್ಷಣ ನೀಡಿ ಆದರ್ಶ ವ್ಯಕ್ತಿಯಾಗುವಂತೆ ಮಾಡುವದಾಗಿ ಹೇಳಿದರು.
ನಾಗವೇಣಿ ಕಟ್ಟಿಮನಿ ಸ್ವಾಗತಿಸಿದರು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಚನ್ನಪ್ಪನವರ ಪರಿಚಯಿಸಿ, ಸಂಸ್ಥೆಯ ಸ್ಥೂಲ ಪರಿಚಯ ನೀಡಿದರು. ನರಸಿಂಹ ಕಾಮಾರ್ತಿ ನಿರೂಪಿಸಿದರು, ರಾಜೇಶ ಖಟವಟೆ ವಂದಿಸಿದರು.
ಕಾರ್ಯಕ್ರಮದಲ್ಲಿ ಗುರುಸಿದ್ಧಪ್ಪ ಕೊಣ್ಣೂರ, ಲಲಿತಾಬಾಯಿ ಮೇರವಾಡೆ, ಪ್ರಕಾಶ ಗುಗ್ಗರಿ, ಪ್ರಮೋದ ಹಿರೇಮಠ, ಶ್ರೀಧರ ಕಾಂಬಳೆ, ಅಭಿಷೇಕ ಮಾಳೋದೆ, ಜ್ಯೋತಿ ಸಂಗಮದ, ಕೇಂದ್ರದ ಆಯಾಗಳು ಮುಂತಾದವರಿದ್ದರು.