ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಜಕ್ಕಲಿಯ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ, ಅದರಗುಂಚಿ ಶಂಕರಗೌಡ್ರ ಹಾಗೂ ಹುತಾತ್ಮ ಪೈಲ್ವಾನ್ ರಂಝಾನ್ ಸಾಬ್ ಸ್ಮಾರಕವನ್ನು ನಿರ್ಮಾಣ ಮಾಡುವುದಕ್ಕಾಗಿ ಕರ್ನಾಟಕ ಮರುನಾಮಕರಣವಾಗಿ 50 ವರ್ಷ ಪೂರೈಸಿದ ನೆನಪಿಗಾಗಿ 2023ರಲ್ಲಿ ಕರ್ನಾಟಕ ಘನ ಸರ್ಕಾರ ಘೋಷಣೆ ಮಾಡಿತ್ತು. ಸದರಿ ಸ್ಮಾರಕದ ಕಾರ್ಯವನ್ನು ತೀವ್ರಗತಿಯಲ್ಲಿ ಪ್ರಾರಂಭಿಸಬೇಕೆಂದು ಶಿರೋಳ-ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಸರ್ಕಾರಕ್ಕೆ ಮನವಿ ಮಾಡಿದರು.
ನರೇಗಲ್ಲನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಏಕೀಕರಣ ಹೋರಾಟಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಮುಂಬೈ ವಿಧಾನಸಭೆಯಲ್ಲಿ ಕನ್ನಡವನ್ನು ಪ್ರಜ್ವಲಿಸಿದ ಕೀರ್ತಿ ಅಂದಾನಪ್ಪ ದೊಡ್ಡಮೇಟಿಯವರಿಗೆ ಸಲ್ಲುತ್ತದೆ. ಅಂತಹ ಮಹಾನ್ ಹೋರಾಟಗಾರರ ಸ್ಮಾರಕದ ಕನಸು ಕನಸಾಗಿಯೇ ಉಳಿದಿದೆ. ಮುಖ್ಯಮಂತ್ರಿಗಳು ಈ ಕೂಡಲೇ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಹುಬೇಗನೆ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಕನ್ನಡಾಭಿಮಾನಿಗಳ ಆಶಾಗೋಪುರಕ್ಕೆ ಕಳಶವಾಗಬೇಕು ಎಂದು ಹೇಳಿದರು.



