ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಪಟ್ಟಣದಲ್ಲಿ ಇರುವ ಏಕೈಕ ದೊಡ್ಡ ಆಟದ ಮೈದಾನವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ಕೂಡಲೇ ನಿಯಂತ್ರಿಸಲು ಕ್ರಮ ಕೈಗೊಳ್ಳುವುದರ ಜೊತೆ ತಾಲೂಕಾ ಕ್ರೀಡಾಂಗಣವನ್ನು ಮಾಡಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದ ಕ್ರೀಡಾಪ್ರೇಮಿಗಳು ಹಾಗೂ ಸಾರ್ವಜನಿಕರು ಶುಕ್ರವಾರ ತಹಸೀಲ್ದಾರ ವಾಸುದೇವ ಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಮೋಹನ ನಂದೆಣ್ಣವರ ಮಾತನಾಡಿ, ಮರಸಭೆಯ ಉಮಾ ವಿದ್ಯಾಲಯ ಮೈದಾನವು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಮೈದಾನದಲ್ಲಿ ಕುಳಿತು ಮದ್ಯಪಾನ ಮಾಡುವುದಲ್ಲದೆ, ಕುಡಿದ ಬಾಟಲಿಗಳನ್ನು ಮೈದಾನದಲ್ಲಿಯೇ ಒಡೆದು ಹೋಗುತ್ತಿದ್ದಾರೆ. ಇದರಿಂದ ಬೆಳಗ್ಗೆ ಮೈದಾನಕ್ಕೆ ವಾಯುವಿಹಾರಕ್ಕೆಂದು ಬರುವ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳಿಗೆ ಒಡೆದ ಗಾಜುಗಳು ಕಾಲಿಗೆ ಚುಚ್ಚಿದ ಸಾಕಷ್ಟು ಉದಾಹರಣೆಗಳಿವೆ. ಮೈದಾನದ ಪಕ್ಷದಲ್ಲಿ ವಾಸವಾಗಿರುವ ನಿವಾಸಿಗಳು ಮಲ-ಮೂತ್ರ ವಿಸರ್ಜನೆಯನ್ನು ಮೈದಾನದ ಒಳ ಬದಿಯಲ್ಲಿ ಮಾಡುತ್ತಿರುವುದರಿಂದ ಮೈದಾನಕ್ಕೆ ಬರುವ ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಮುಜುಗುರವಾಗುತ್ತಿದ್ದು, ಸಂಬAಧಪಟ್ಟ ಇಲಾಖೆ ಕೂಡಲೇ ಈ ಅನೈತಿಕ ಚಟುವಟಿಕೆಯನ್ನು ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸದಾನಂದ ನಂದೆಣ್ಣವರ, ಮಹಾಂತೇಶ ಗುಡಿಸಲಮನಿ, ರಬ್ಬಾನಿ ಶಿರಹಟ್ಟಿ, ಮುಜಮಿಲ್ ಮಕಾನದಾರ, ಮಲ್ಲಿಕಾರ್ಜುನ ಸಾಲ್ಮನಿ, ಸಂತೋಷ ಹಾದಿಮನಿ, ಸಂತೋಷ ನಂದೆಣ್ಣವರ, ನಿಂಗಪ್ಪ ಬಾಲಣ್ಣವರ, ಹನುಮಂತಪ್ಪ ನಡವಲಕೇರಿ, ವಿಷ್ಣು ಕೆ, ಆದಿತ್ಯ ಗಡದವರ, ಚೇತನ ಗೋಡಕೆ, ಆನಂದ ನರೇಗಲ್, ಬಸವರಾಜ ಗಡದವರ ಮುಂತಾದವರಿದ್ದರು.