Homecultureಸಮಾಜ ಸೇವೆಯಿಂದ ಗೆದ್ದ ಸಾಮ್ರಾಟ

ಸಮಾಜ ಸೇವೆಯಿಂದ ಗೆದ್ದ ಸಾಮ್ರಾಟ

For Dai;y Updates Join Our whatsapp Group

Spread the love

ಕನ್ನಡ ನಾಡು-ನುಡಿ, ಧರ್ಮ, ಕಲೆ ಅವುಗಳ ಸರ್ವತೋಮುಖವಾದ ಏಳಿಗೆಗಾಗಿ ತಮ್ಮ ಪವಿತ್ರವಾದ ಜೀವನವನ್ನೇ ಮುಡುಪಾಗಿಟ್ಟಿದ್ದ ಗದಗ ವಿರೇಶ್ವರ ಪುಣ್ಯಾಶ್ರಮದ ಕುಲಪತಿಗಳು, ಅಂಧರ ಬಾಳಿನ ಕಣ್ಣುಗಳಾದ ಕನ್ನಡ, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಕವಿವರ್ಯರೂ, ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತಗಳ ಆಚಾರ್ಯ ಪುರುಷರು, ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಶಿಷ್ಯರೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಆದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು ತಾವೇ ರಚಿಸಿದ ಹಿಂದಿ ಬಸವ ಪುರಾಣದಲ್ಲಿ `ಮೈ ಛೋಟೋ ಮೆ ಛೋಟಾ ಹೂಂ’ ಎಂದು ವಿನಯಶೀಲತೆಯಿಂದ ತಮ್ಮನ್ನು ಕರೆದುಕೊಂಡರೂ ಅವರ ಹೆಸರು ಪುಟ್ಟರಾಜರಾದರೂ ಅಂಧ ಅನಾಥರ, ದೀನ-ದಲಿತರ ದೊಡ್ಡ ರಾಜರಿವರು, ಅಂಧ ಅನಾಥರಿಂದ ತುಂಬಿದ ಪುಣ್ಯಾಶ್ರಮವೇ ಇವರಿಗೆ ಅರಮನೆ ಇದ್ದಹಾಗೆ, ಸಂಗೀತ ವಾದ್ಯಗಳೇ ಇವರ ಕತ್ತಿ-ಕಠಾರಿಗಳು, ಕುರುಡು ಶಿಷ್ಯರೇ ಸೈನಿಕರು, ಜಗದ ಜನರ ಹೃದಯ ಸಾಮ್ರಾಜ್ಯವನ್ನು ಧರ್ಮ, ಸಂಗೀತ, ಸಾಹಿತ್ಯ ಸಮಾಜ ಸೇವೆಯಿಂದ ಗೆದ್ದ ಸಾಮ್ರಾಟರಿವರು.

ಪರಶಿವನ ಅವತಾರಿಯಾಗಿ ಲೋಕ ಉದ್ದರಿಸಲು ಮಾಡಿದ ಧರೆಯ ದೇವರು, ಜ್ಞಾನವೇ ಮೂರ್ತಿವೆತ್ತಂತೆ ಧರೆಗಿಳಿದು ಬಂದ `ಜ್ಞಾನ ದೇಗುಲ’ ಇವರು. ಈ ದೇಗುಲದಲ್ಲಿ ಬಡವ-ಬಲ್ಲಿದ, ಮೇಲು-ಕೀಳು ಎನ್ನುವ ತಾರತಮ್ಯವಿರಲಿಲ್ಲ. ಎಲ್ಲರಿಗೂ ಮುಕ್ತ ಪ್ರವೇಶ, ಕರುಣಾಮಯಿ ವಿಶ್ವ ಮಾನವ ರಸಋಷಿ, ದೇವಮಾನವ ಮಹಿಮಾ ಪುರುಷರು. ಕಾರಣೀಕ ಯುಗ ಪುರುಷ ಎಂದು ನಾಡಿಗೆ ಗೊತ್ತಿದೆ. ಸಂಗೀತ, ಸಾಹಿತ್ಯ, ಶೈಕ್ಷಣಿಕ, ಧರ್ಮ, ಸಮಾಜಿಕ ರಂಗದಲ್ಲಿ ಜಗದ್ಗುರುವಾಗಿ ಅಮರರಾಗಿರುವ ಮಹಾ ಮಾನವತಾವಾದಿಯೇ ಗುರುಪುಟ್ಟರಾಜರು.

ಪೂಜ್ಯ ಪುಟ್ಟರಾಜ ಗವಾಯಿಗಳವರು, 1914ನೇ ಮಾರ್ಚ್ 3ರಂದು ಹಾವೇರಿ ತಾಲೂಕಿನ ಕರ್ಜಗಿಯ ಹತ್ತಿರದ ದೇವಗಿರಿಯಲ್ಲಿ ಜನಿಸಿದರು. ಇವರ ಮೂಲ ಊರು ಹಾನಗಲ್ಲ ತಾಲೂಕಿನ ದೇವರ ಹೊಸಪೇಟೆ ಎಂಬ ಹಳ್ಳಿ. ಹೆರಿಗೆಗಾಗಿ ಇವರ ತಾಯಿಯನ್ನೂ ದೇವಗಿರಿಗೆ ಕರೆದುಕೊಂಡು ಹೋಗಿದ್ದರಿಂದ ಅಲ್ಲಿಯೇ ಪುಟ್ಟರಾಜರ ಜನನವಾಯಿತು. ಮಗುವಿಗೆ ಪುಟ್ಟಯ್ಯನೆಂದು ನಾಮಕರಣ ಮಾಡಿದರು.

ಹುಟ್ಟಿದ ಆರು ತಿಂಗಳಿಗೆ ಕಣ್ಣು ಬೇನೆ ಬಂದು ಕಣ್ಣಲ್ಲಿ ಪರಿ ಬೆಳೆದವು. ಹಳ್ಳಿಯ ನಾಟಿ ವೈದ್ಯರ ಸಲಹೆಯಂತೆ ಕಣ್ಣಿನ ಪರಿ ಹರಿಯಲು ತೋನಸಿಗಳನ್ನು ಬಳಿಸಿದರು. ಆ ತೋನಸಿ ಪರಿ ಹರಿಯುವದರ ಬದಲು ಇವರ ಕಣ್ಣುಗುಡ್ಡೆಯನ್ನೇ ಹರಿದವು, ದೈವ ನಿಯವವನ್ನು ಮೀರಲು ಸಾಧ್ಯವಿಲ್ಲದ ಕಾರಣ ಕೂಸು ಕುರುಡಾಗಿ ದೃಷ್ಟಿ ಬರಡಾಯಿತು.

ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಾಗ ಸೋದರ ಮಾವ ಚಂದ್ರಶೇಖರಯ್ಯನವರೇ ಈ ಅನಾಥ ಮಗುವಿನ ಪೋಷಣೆಯ ಭಾರ ಹೊತ್ತುಕೊಂಡರು. ಪಂಡಿತ ಪಂಚಾಕ್ಷರ ಗವಾಯಿಗಳವರ ಶಿಷ್ಯರಾಗಿದ್ದ ಇವರು ಸಂಗೀತ ಮತ್ತು ಸಾಹಿತ್ಯದಲ್ಲಿ ಪುಟ್ಟರಾಜರಿಗೆ ಮೊದಲ ಗುರುವಾದರು. ತಮ್ಮಲ್ಲಿದ್ದ ಎಲ್ಲ ವಿದ್ಯೆಯನ್ನು ಪುಟ್ಟರಾಜರಿಗೆ ಧಾರೆ ಎರೆದರು. 8ನೇ ವಯಸ್ಸಿಗೆ ಪುಟ್ಟರಾಜರಿಗೆ ಸಂಗೀತ ಮತ್ತು ಸಾಹಿತ್ಯ ಕುರಿತು ವಚನ, ಚೀಜ್, ತತ್ವಪದಗಳನ್ನು ಸರಳವಾಗಿ ಬಾರಿಸುತ್ತಾ ಹಾಡುವುದಕ್ಕೆ ಸಮರ್ಥರಾದರು.

ಪುಟ್ಟರಾಜರಿಗೆ ಎಂಟು ವರ್ಷವಿದ್ದಾಗ ಚಂದ್ರಶೇಖರಯ್ಯನವರು ಅವರ ಭವಿಷ್ಯದ ಬಗೆಗೆ ಚಿಂತಿಸಿ ಅವರನ್ನು ಶ್ರೇಷ್ಠ ಸಂಗೀತಗಾರರನ್ನಾಗಿಸಬೇಕೆಂದು ಸಂಕಲ್ಪಿಸಿ ಅವರಿಗೆ ಸಮರ್ಥ ಗುರು ಎಂದು ಪಂಚಾಕ್ಷರಿ ಗವಾಯಿಗಳು ಎಂದು ನಿರ್ಧರಿಸಿ ಅವರಿದ್ದ ನವಲಗುಂದ ಕ್ಯಾಂಪ್‌ಗೆ ಕರೆತಂದರು. ಗುರು ಕೇಳಿದ ಪ್ರಶ್ನೆಗಳಿಗೆ ಪುಟ್ಟರಾಜರು ದಿಟ್ಟತನದಿಂದಲೇ ಉತ್ತರ ಕೊಟ್ಟರು. ಹುಡುಕುವ ಬಳ್ಳಿ ಕಾಲ್ತೊಡಕಿದಂತಾಯಿತು. ನನ್ನ ಹೆಸರು ಬೆಳಗುವ ಕಂದ(ಶಿಷ್ಯ)ನನ್ನು ಗುರು ಕುಮಾರೇಶ್ವರನೇ ಕಳಿಸಿಕೊಟ್ಟಿರುವನು ಎಂದು ಆನಂದ ಭಾಷ್ಪ ಸುರಿಸಿದರು.

ಪಟ್ಟರಾಜರ ಆಗಾಧ ಜ್ಞಾನಕ್ಕೆ ಮಾರು ಹೋಗಿ ಅವರಿಗೆ ಕನ್ನಡ, ಸಂಸ್ಕೃತಿ, ಹಿಂದಿ, ಸಾಹಿತ್ಯವನ್ನು ಕಲಿಸುವ ಏರ್ಪಾಡು ಮಾಡಿದರು. ಬೆರಳು ಕೊಟ್ಟರೆ ಹಸ್ತ ನುಂಗುವ ಪುಟ್ಟರಾಜರು, ಹಿಂದಿ, ಸಂಸ್ಕೃತ ಮತ್ತು ಕನ್ನಡದಲ್ಲಿ ಪ್ರಖ್ಯಾತ ಪಂಡಿತರಾಗಿ ನಂತರ ತಾವೇ ಉಳಿದ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ತೊಡಗಿದರು. ಉಭಯ ಗಾನ ವಿಶಾರದರಾದ ಪಂ. ಪಂಚಾಕ್ಷರ ಗವಾಯಿಗಳು ತಮ್ಮ ಸಂಗೀತ ವಿದ್ಯೆಯಲ್ಲವನ್ನೂ ಗುರುಪುಟ್ಟರಾಜರಿಗೆ ಧಾರೆ ಎರೆದರು. ಗುರು ಪುಟ್ಟರಾಜರು ಉಭಯಗಾಯನ ವಿಶಾರದರಾಗಿ ಹಾರ್ಮೋ ನಿಯಂ, ತಬಲಾ, ವಾಯಲಿನ್, ಸಾರಂಗಿ ಮುಂತಾದ ವಾದ್ಯಗಳನ್ನು ಲೀಲಾ ಜಾಲವಾಗಿ ನುಡಿಸಬಲ್ಲ ಸಾಮರ್ಥ್ಯ ಹೊಂದಿ ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ಒಲಿಸಿಕೊಂಡು ಪಂಡಿತ ಪುಟ್ಟರಾಜರಾಗಿ, ಗುರುವಿಗೆ ತಕ್ಕ ಶಿಷ್ಯರಾಗಿ ಮೆರೆದರು.

ಗುರು ಪುಟ್ಟರಾಜರ 110ನೇ ಜಯಂತ್ಯುತ್ಸವವನ್ನು ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಮತ್ತು ಆಶ್ವಿನಿ ಪ್ರಕಾಶನದಡಿಯಲ್ಲಿ ಆಚರರಿಸುತ್ತಿರುವುದು ಕೂಡ ನಮ್ಮ ಸೌಭಾಗ್ಯವೇ ಸರಿ.

– ಡಾ. ವ್ಹಿ.ವ್ಹಿ. ಹಿರೇಮಠ.
ಅಧ್ಯಕ್ಷರು ಅಶ್ವಿನಿ ಪ್ರಕಾಶನ, ಗದಗ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!