ವಿಜಯಸಾಕ್ಷಿ ಸುದ್ದಿ, ಧಾರವಾಡ: ರಾಜ್ಯ ಸರ್ಕಾರದ ತರಬೇತಿ ನೀತಿ-1997ರಂತೆ, ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಿಲ್ಲಾ ತರಬೇತಿ ಕೇಂದ್ರಗಳು ಮತ್ತು ಸಚಿವಾಲಯ ತರಬೇತಿ ಸಂಸ್ಥೆಯ ಮೂಲಕ ಸಿಬ್ಬಂದಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ನೀಡುವ ಮಹತ್ವದ ಹೆಜ್ಜೆ ಕೈಗೊಳ್ಳಲಾಗಿದೆ.
ಇನ್ನು ಮುಂದೆ ತರಬೇತಿ ಕೇವಲ ಭೌತಿಕವಷ್ಟೇ ಅಲ್ಲದೆ, ವೇದಿಕೆಯ ಸಹಭಾಗಿತ್ವದಲ್ಲಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿಯೂ ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಪ್ರಸ್ತುತ 4,55,746 ಸರ್ಕಾರಿ ನೌಕರರು ಈ ವೇದಿಕೆಯಲ್ಲಿ ನೋಂದಣಿ ಮಾಡಿದ್ದಾರೆ. ಸರ್ಕಾರಿ ನೌಕರರು ಅವರ ಎಚ್‌ಆರ್‌ಎಮ್‌ಎಸ್ ಮೊಬೈಲ್ ಸಂಖ್ಯೆಯ ಮೂಲಕ ವೇದಿಕೆಯಲ್ಲಿ ಲಾಗಿನ್ ಆಗಿ ತರಬೇತಿ ಪಡೆಯಬಹುದಾಗಿದೆ.
ಕೆಲಸದ ಹೊರೆ ಅಥವಾ ಸಿಬ್ಬಂದಿ ಕೊರತೆಯಿಂದಾಗಿ ವೈಯಕ್ತಿಕವಾಗಿ ತರಬೇತಿಗಳಿಗೆ ಹಾಜರಾಗಲು ಸಾಧ್ಯವಾಗದ ಸರ್ಕಾರಿ ನೌಕರರು ಈ ಸೌಲಭ್ಯವನ್ನು ಪಡೆಯಬಹುದು. ಸುಮಾರು ಹತ್ತು ತರಬೇತಿ ಮಾಡ್ಯೂಲ್‌ಗಳನ್ನು ಈಗಾಗಲೇ ಅಪ್‌ಲೋಡ್ ಮಾಡಲಾಗಿದೆ ಮತ್ತು ಇನ್ನೂ ಹಲವು ಮಾಡ್ಯೂಲ್‌ಗಳು ತಯಾರಿಕಾ ಪ್ರಕ್ರಿಯೆಯಲ್ಲಿವೆ. ಇದು ಕೇವಲ ಸಾಮರ್ಥ್ಯವರ್ಧನೆಯಷ್ಟೇ ಅಲ್ಲದೆ, ಸರ್ಕಾರದ ಕಾರ್ಯವೈಖರಿ ಹಾಗೂ ಜನತೆಗೆ ಒದಗಿಸಬಹುದಾದ ಸೇವೆಗಳ ಗುಣಮಟ್ಟವನ್ನು ಉತ್ತುಂಗಕ್ಕೆ ಎತ್ತುವ ದಿಕ್ಕಿನಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿವರ್ಗದವರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿ, ತಮಗೆ ಅಗತ್ಯವಾದ ತರಬೇತಿಗಳನ್ನು ಪಡೆಯುವುದರ ಮೂಲಕ ಸಮರ್ಥ ಹಾಗೂ ಜನಮೈತ್ರಿ ಆಡಳಿತಕ್ಕೆ ಪೂರಕವಾಗಿ ತಮ್ಮ ಪಾತ್ರವನ್ನು ನಿಭಾಯಿಸಬಹುದಾಗಿದೆ.
ಬೆಂಗಳೂರಿನಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಂತೆ ಎಲ್ಲಾ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸಲು ರಾಜ್ಯ ಸರ್ಕಾರವು ರೂಪಿಸಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯುಕ್ತವಾಗಿ ಚಾಲನೆ ನೀಡಿದರು. ಅದೇ ಸಂದರ್ಭದಲ್ಲಿ ಯೋಜನೆಗೆ ವ್ಯವಸ್ಥೆಯಡಿ ಸರ್ಕಾರಿ ನೌಕರರ ನೋಂದಣಿನ್ನು ಕೈಗೊಳ್ಳಲಾಯಿತು.
ಈ ಮಹತ್ವಾಕಾಂಕ್ಷಿ ಯೋಜನೆಯಡಿ ಸರ್ಕಾರದ ವಿವಿಧ ಇಲಾಖೆಗಳ 6 ಲಕ್ಷ ನೌಕರರುಸೇರಿದಂತೆ ಅವರ ಕುಟುಂಬದ ಸದಸ್ಯರನ್ನು ಒಳಗೊಂಡಂತೆ ಅಂದಾಜು 25 ಲಕ್ಷ ಫಲಾನುಭವಿಗಳು ನಗದು ರಹಿತ ಆರೋಗ್ಯ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಯೋಜನೆಯಡಿ ಮೊದಲನೇ ಹಂತದಲ್ಲಿ ಸರ್ಕಾರಿ ನೌಕರರು ಅಂದಾಜು 2000 ಒಳರೋಗಿ ಚಿಕಿತ್ಸಾ ವಿಧಾನಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.