ವಿಜಯಸಾಕ್ಷಿ ಸುದ್ದಿ, ಗದಗ: ಹಾಲಕೆರೆ ಆನ್ನದಾನೇಶ್ವರ ಮಹಾಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಶ್ರೀಗಳ ಸಂಕಲ್ಪದಂತೆ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಸೆ. 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ಮಹಾವಿದ್ಯಾಲಯವನ್ನು ಉದ್ಘಾಟಿಸುವರು. ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಆನಂದಾಶ್ರಮ ಕಟ್ಟಡವನ್ನು ಉದ್ಘಾಟಿಸುವರು. ಮುಂಡರಗಿ ಆನ್ನದಾನೇಶ್ವರ ಮಠದ ನಾಡೋಜ ಜಗದ್ಗುರು ಡಾ. ಅನ್ನದಾನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.
ನಂದವಾಡಗಿ ಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಂತೆಕೆಲೂರ ಘನಮಠೇಶ್ವರಮಠದ ಗುರುಬಸವ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಸಿ.ಸಿ. ಪಾಟೀಲ, ಹಂಪನಗೌಡ ಬಾದರ್ಲಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಅಮರೇಗೌಡ ಬಯ್ಯಾಪೂರ, ಡಿ.ಆರ್. ಪಾಟೀಲ ಪಾಲ್ಗೊಳ್ಳುವರು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಎನ್.ಆರ್. ಗೌಡರ, ನಿಂಗರಾಜ ಬೇವಿನಕಟ್ಟಿ, ಜೆ.ಎನ್. ಪಾಟೀಲ, ಬಿ.ಎನ್. ಪಾಟೀಲ ಹಾಗೂ ವಿದ್ಯಾಸಾಗರ ಇದ್ದರು.
ಪ್ರಾಚಾರ್ಯ ವೈ.ಸಿ. ಪಾಟೀಲ ಮಾತನಾಡಿ, ಬಡ ವಿದ್ಯಾರ್ಥಿಗಳ ವಸತಿ ಶಿಕ್ಷಣಕ್ಕಾಗಿ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯಿಂದ ಉತ್ತರ ಕರ್ನಾಟಕ ಸೇರಿ ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆಗಳಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹದ ಜೊತೆಗೆ ಉಚಿತವಾಗಿ ಅನ್ನದಾಸೋಹವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.



