ರಾಯಚೂರು:- ಮತ್ತು ಬರುವ ಔಷಧಿ ನೀಡಿ ಮಗು ಅಪಹರಣ ಮಾಡಿದ್ದ ಕಲಬುರಗಿ ಮೂಲದ ದಂಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕದ್ದ ಮಗುವನ್ನು ರಾಯಚೂರು ಜಿಲ್ಲೆಯ ದೇವದುರ್ಗದ ಬಂಡೆಗುಡ್ಡ ತಾಂಡಾದ ಪ್ರಕಾಶ್ ಹಾಗೂ ಹಂಪಮ್ಮ ದಂಪತಿಯ ಮಗು ಎಂದು ಗುರುತಿಸಲಾಗಿದೆ.
ರಾಯಚೂರಿನಿಂದ ಬೆಂಗಳೂರಿಗೆ ಉದ್ಯಾನ ಎಕ್‌ಪ್ರೆಸ್ ರೈಲಿನಲ್ಲಿ ದಂಪತಿ ತಮ್ಮ ಎರಡು ಮಕ್ಕಳೊಂದಿಗೆ ಗುಳೆ ಹೊರಟಿದ್ದರು. ಅದೇ ರೈಲಿನಲ್ಲಿ ಕಲಬುರಗಿ ಮೂಲದ ರೂಪೇಶ್ ಹಾಗೂ ಕುಸುಮ ದಂಪತಿ ಪ್ರಯಾಣಿಸುತ್ತಿದ್ದರು. ರೂಪೇಶ್ ಮತ್ತು ಕುಸುಮ ಪಕ್ಕದ ಸೀಟಿನಲ್ಲಿ ಕುಳಿತು ಮಗುವಿನೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಬಿಸ್ಕೆಟ್ ಕೊಟ್ಟಿದ್ದರು.
ರಾತ್ರಿ ಮಗುವಿನ ತಂದೆ, ತಾಯಿ ಮಲಗಿದಾಗ ಆಂಧ್ರಪ್ರದೇಶದ ಅನಂತಪುರ ರೈಲು ನಿಲ್ದಾಣದಲ್ಲಿ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದರು. ಅಲ್ಲಿಂದ ಮಗುವನ್ನು ಬಸ್ಸಿನಲ್ಲಿ ಮಂತ್ರಾಲಯಕ್ಕೆ ಕರೆದೊಯ್ದು ಕೂದಲು ಕತ್ತರಿಸಿದ್ದರು. ಬಳಿಕ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಓಡಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ.
ವಿಚಾರಣೆ ನಡೆಸಿದಾಗ 22 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮಕ್ಕಳಾಗದ ಹಿನ್ನೆಲೆ ಮಗು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.