ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪುತ್ರ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾನೆ. ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್ ಶಂಕರ್ ಓದುತ್ತಿರುವ ಶಾಲೆಯಲ್ಲಿ ನಡೆದ ಬೆಂಕಿ ಅವಘಡ ಸಂಭವಿಸಿದ್ದು ಮಾರ್ಕ್ಗೆ ತೀವ್ರ ಸುಟ್ಟ ಗಾಯಗಳಾಗಿವೆ ಎನ್ನಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸಿಂಗಪುರಕ್ಕೆ ತೆರಳಿದ ಪವನ್ ಕಲ್ಯಾಣ್ ಪುತ್ರನ ಆರೈಕೆಯಲ್ಲಿ ತೊಡಗಲಿದ್ದಾರೆ.
ಪವನ್ ಕಲ್ಯಾಣ್ ಪತ್ನಿ ಸಿಂಗಪುರದಲ್ಲಿ ನೆಲೆಸಿದ್ದು ಅವರ ಮಗ ಮಾರ್ಕ್ ಅಲ್ಲಿಯೇ ಶಾಲೆಗೆ ಹೋಗುತ್ತಿದ್ದಾನೆ. ಹೀಗಾಗಿ ಪವನ್ ಕಲ್ಯಾಣ್ ಆಗಾಗ ಸಿಂಗಪುರಕ್ಕೆ ಹೋಗಿ ಬರುತ್ತಿರುತ್ತಾರೆ. ಇತ್ತೀಚೆಗೆ ಮಾರ್ಕ್ ಶಂಕರ್ ಓದುತ್ತಿರುವ ಶಾಲೆಯಲ್ಲಿ ಬೆಂಕಿ ಅವಘಡ ನಡೆದಿದ್ದು, ಅವಘಡದಲ್ಲಿ ಮಾರ್ಕ್ ನ ಕಾಲು, ಬೆನ್ನು, ಕೈಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಇದರ ಜೊತೆಗೆ ಅತಿಯಾದ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದ್ದು, ಮಾರ್ಕ್ ಶಂಕರ್ ಅನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ಡಿಸಿಎಂ ಪವನ್ ಕಲ್ಯಾಣ್ ಅವರು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪ್ರವಾಸದಲ್ಲಿದ್ದರು. ಮಗನಿಗೆ ಬೆಂಕಿ ತಗುಲಿರುವ ವಿಚಾರ ತಿಳಿಯುತ್ತಿದ್ದಂತೆಯೇ, ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಸಿಂಗಾಪುರಕ್ಕೆ ತೆರಳುವಂತೆ ಅಧಿಕಾರಿಗಳು, ಜನಸೇನಾ ಪಕ್ಷದ ನಾಯಕರು ಪವನ್‌ಗೆ ಸಲಹೆ ನೀಡಿದರು. ಆದರೆ, ಕುರಿಡಿ ಎಂಬ ಗ್ರಾಮದ ಬುಡಕಟ್ಟು ಜನಾಂಗದವರನ್ನು ಭೇಟಿ ಮಾಡುವುದಾಗಿ ಪವನ್ ಭರವಸೆ ನೀಡಿದ್ದರು. ಆದ್ದರಿಂದ ಆ ಗ್ರಾಮಕ್ಕೆ ಹೋಗಿ ಅವರೊಂದಿಗೆ ಮಾತನಾಡಿ ಅಲ್ಲಿನ ಸಮಸ್ಯೆಗಳನ್ನು ಮೊದಲು ಆಲಿಸುತ್ತೇನೆ ಅಂತ ಪವನ್ ತಿಳಿಸಿದ್ದರು ಎಂದು ಗೊತ್ತಾಗಿದೆ.
ಸಿಂಗಾಪುರದ ರಿವರ್ ವ್ಯಾಲಿ ಟೊಮ್ಯಾಟೋ ಕುಕ್ಕಿಂಗ್ ಸ್ಕೂಲ್‌ನಲ್ಲಿ ಬೆಂಕಿ ದುರಂತ ಸಂಭವಿಸಿದ್ದು, 1 ಒಂದು ಮಗು ಸಾವನ್ನಪ್ಪಿದ್ದು, ಮಕ್ಕಳು ಸೇರಿ 18 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೇವಾ ಅವರಿಗೆ ಇಬ್ಬರು ಮಕ್ಕಳು ಮಾರ್ಕ್ ಶಂಕರ್ ಮತ್ತು ಪೊಲೇನಾ ಅಂಜನಾ. ಈ ಇಬ್ಬರೂ ಸಹ ಸಿಂಗಪುರದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಶಾಲೆ ಓದುತ್ತಿದ್ದಾರೆ.