ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ರೋಗಿಯನ್ನು ಕರೆತರಲು ತೆರಳುತ್ತಿದ್ದ ಆ್ಯಂಬುಲೆನ್ಸ್ನ್ನು ತಡೆದು ನಿಲ್ಲಿಸಿ ರಸ್ತೆ ರಂಪಾಟ ನಡೆಸಿರುವ ಘಟನೆ ವರದಿಯಾಗಿದೆ.
ಆನೇಕಲ್ನ ಅಲಯನ್ಸ್ ಕಾಲೇಜು ಮುಂಭಾಗ ಈ ಘಟನೆ ನಡೆದಿದ್ದು, ಕಾಲೇಜು ಎದುರಿನ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರಿಗೆ ಆ್ಯಂಬುಲೆನ್ಸ್ ಸ್ಪರ್ಶಿಸಿದೆ ಎಂಬ ಕಾರಣಕ್ಕೆ ಕಾರು ಚಾಲಕ ಹಾಗೂ ಕೆಲ ವಿದ್ಯಾರ್ಥಿಗಳು ಗಲಾಟೆ ಆರಂಭಿಸಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಆ್ಯಂಬುಲೆನ್ಸ್ನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಲಾಗಿದ್ದು, ಈ ವೇಳೆ ಆ್ಯಂಬುಲೆನ್ಸ್ ಚಾಲಕನಿಗೆ ಅಶ್ಲೀಲ ಪದಗಳಿಂದ ನಿಂದನೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರೋಗಿಗಳನ್ನು ಸಾಗಿಸುವ ತುರ್ತು ವಾಹನಕ್ಕೆ ಅಡ್ಡಿಪಡಿಸಿ, ಅದರ ಸಿಬ್ಬಂದಿಗೆ ಅವಾಚ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾನವೀಯತೆ ಮರೆತು ತುರ್ತು ಸೇವೆಗೆ ಅಡ್ಡಿ ಉಂಟುಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ಕೇಳಿಬಂದಿದೆ.



