ಕೊಪ್ಪಳ:-ಮಕ್ಕಳು ಆರೋಗ್ಯದಿಂದ ಇರಲಿ, ಪೌಷ್ಟಿಕಾಂಶ ಆಹಾರ ಸೇವನೆ ಮಾಡಲಿ ಅಂತ ಒಂದೆಡೆ ಸರ್ಕಾರ ಅಂಗನವಾಡಿಗಳಿಗೆ ಮೊಟ್ಟೆ ವಿತರಿಸುತ್ತಿದ್ದರೆ, ಮತ್ತೊಂದೆಡೆ ಅಂಗನವಾಡಿ ಕಾರ್ಯಕರ್ತರು ಮೊಟ್ಟೆ ಕೊಡದೆ ವಂಚಿಸುತ್ತಿದ್ದಾರೆ.
ಹೌದು, ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿ ವಂಚನೆ ಆರೋಪ ಕೇಳಿ ಬಂದಿದ್ದು ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾಬೇಗಂ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಿಬ್ಬಂದಿಯನ್ನು ಅಮಾನತು ಮಾಡಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಗೋಲ್ಮಾಲ್ ನಡೆದಿದೆ. ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಲೆತಗ್ಗಿಸುವಂತ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ ನಂತರ ಮೊಟ್ಟೆ ಕಸಿದುಕೊಳ್ಳುವ ವಿಡಿಯೋ ವೈರಲ್ ಆಗಿದೆ.
ಮಕ್ಕಳು ಬಾಯಿಗೆ ಮೊಟ್ಟೆ ಹಾಕಿಕೊಳ್ಳೊಕ್ಕೆ ಮುಂಚೆನೇ ಕಾರ್ಯಕರ್ತರು ಮರಳಿ ಮೊಟ್ಟೆ ಕಸಿದಿದ್ದಾರೆ. ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತು ಮಾಡಲಾಗಿದೆ. ಇನ್ನು ಸ್ಥಳೀಯರು ಕೂಡ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ಅವ್ಯವಸ್ಥೆ ಮತ್ತು ಅಕ್ರಮ ಹೆಚ್ಚಾಗಿದ್ದು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿ.ಚಂದ್ರಶೇಖರ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಅಂಗನವಾಡಿ ಅಕ್ರಮ ಕಂಡು ಸ್ವತ ನ್ಯಾಯಾಧೀಶರು ಶಾಕ್ ಆಗಿದ್ದಾರೆ. ಕಳೆದ ಒಂದು ವಾರದಲ್ಲಿ 53 ಅಂಗನವಾಡಿಗಳಿಗೆ ನ್ಯಾಯಾಧೀಶರು ಭೇಟಿ ನೀಡಿದ್ದಾರೆ. ನ್ಯಾಯಾಧೀಶರ ಭೇಟಿ ಸಮಯದಲ್ಲಿ ಅನೇಕ ಅಕ್ರಮ, ಅವ್ಯವಸ್ಥೆ ಕಂಡುಬಂದಿದೆ. ಅನೇಕ ಅಂಗನವಾಡಿಗಳಲ್ಲಿ ಹಾಜರಾತಿ ತೋರಿಸಿದಷ್ಟು ಮಕ್ಕಳು ಇಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಸ್ವಚ್ಚತೆಯೇ ಮರೆಯಾಗಿದೆ ಎನ್ನಲಾಗಿದೆ.