ಯಾವುದೇ ಸಂಭಾವನೆ ಇಲ್ಲದೆ ಅನಿಲ್ ಕುಂಬ್ಳೆ ಅರಣ್ಯ ಇಲಾಖೆ ರಾಯಭಾರಿ ಆಗಲು ಸಮ್ಮತಿಸಿದ್ದಾರೆ: ಈಶ್ವರ್ ಖಂಡ್ರೆ

0
Spread the love

ಬೆಂಗಳೂರು: ವನ್ಯಜೀವಿ, ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆಗೆ ಈಗ ಅನಿಲ್ ಕುಂಬ್ಳೆ ಬಲ ದೊರೆತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ್ದ ಖ್ಯಾತ ಮಾಜಿ ಕ್ರಿಕೆಟಿಗ ಹಾಗೂ ಪರಿಸರ ಪ್ರೇಮಿ ಅನಿಲ್ ಕುಂಬ್ಳೆ ಅವರೊಂದಿಗೆ ಸಮಾಲೋಚಿಸಿದ ಅವರು,

Advertisement

ವನ್ಯಜೀವಿ, ಅರಣ್ಯ, ಪರಿಸರದ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿರುವ ಅನಿಲ್ ಕುಂಬ್ಳೆ ಅವರು ಯಾವುದೇ ಸಂಭಾವನೆ ಇಲ್ಲದೆ ಅರಣ್ಯ, ವನ್ಯಜೀವಿ ರಾಯಭಾರಿ ಆಗಲು ಸಮ್ಮತಿಸಿದ್ದಾರೆ ಇದು ಅವರ ಪರಿಸರ ಕಾಳಜಿ, ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ತಮ್ಮ ಲೆಗ್ ಸ್ಪಿನ್ ಮೋಡಿಯಿಂದ ಭಾರತ ತಂಡದ ಹಲವು ಗಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಕುಂಬ್ಳೆ ಅವರು ಕರ್ನಾಟಕದ ಅಷ್ಟೇ ಅಲ್ಲ ಭಾರತದ ಹೆಮ್ಮೆಯ ಪುತ್ರರಾಗಿದ್ದಾರೆ. ಜಿಂ ಲೇಕರ್ ಬಳಿಕ ಒಂದು ಟೆಸ್ಟ್ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೆಟ್ ಪಡೆದ ಸಾಧನೆ ಮಾಡೆದ ಮಾಂತ್ರಿಕ ಬೌಲರ್ ಎಂದರು.

110 ಟೆಸ್ಟ್ ಪಂದ್ಯಗಳನ್ನು ಆಡಿ 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಅವರು ಜಂಬೂ ಎಂದೂ ಖ್ಯಾತರಾಗಿದ್ದಾರೆ. ಅದೇ ರೀತಿ 264ಕ್ಕೂ ಅಧಿಕ ಏಕ ದಿನ ಪಂದ್ಯ ಆಡಿರುವ ಅವರು 337 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್ ಪ್ರಿಯರ ಹೃದಯದಲ್ಲಿ ನೆಲೆಸಿದ್ದಾರೆ. ಇವರು ಅರಣ್ಯ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಪ್ರಚಾರ, ಪ್ರಸಾರ ಮಾಡಲಿದ್ದು, ಜನರಲ್ಲಿ ಜಾಗೃತಿ ಮೂಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವೂ ಕುಂಬ್ಳೆ ಅವರಿಗಿದೆ. ಅನಿಲ್ ಕುಂಭ್ಳೆ ಅವರು ರಾಯಭಾರಿ ಆಗುತ್ತಿರುವುದು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಂವರ್ಧನೆಗೆ ಬಲ ನೀಡಲಿದೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಅನಿಲ್ ಕುಂಬ್ಳೆ ಮಾತನಾಡಿ, ತಮ್ಮನ್ನು ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿರುವುದಕ್ಕೆ ಧನ್ಯವಾದ ಅರ್ಪಿಸಿದರು. ಇಲಾಖೆಯ ಜೊತೆಗೂಡಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here