ಗದಗ:- ಗದಗ ನಗರದಲ್ಲಿ ಮತ್ತೆ ಪುಡಿರೌಡಿಗಳ ಅಟ್ಟಹಾಸ ಎಲ್ಲೆ ಮೀರಿದೆ.
ಎಸ್, ಅದರ ಭಾಗವಾಗಿ ಅಣ್ಣಾ ಅಣ್ಣಾ ಅಂತ ಹವಾ ಮೆಂಟೆನ್ ಮಾಡುತ್ತಿದ್ದವನಿಗೆ ಸ್ನೇಹಿತ ಎಂಬ ಸಲುಗೆಯಿಂದ ‘ಲೇ’ ಎಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗದಗ ನಗರದ ಹಾತಲಗೇರಿ ನಾಕಾ ಬಳಿ ಜರುಗಿದೆ. 22 ವರ್ಷದ ಕಾರ್ತಿಕ್ ಗಾಯಗೊಂಡ ಯುವಕ.
ಅಣ್ಣಾ ಅಂತ ನೀನು ಯಾಕೆ ಅಂದಿಲ್ಲ ಅಂತ ಗೆಳೆಯನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ನೇಹಿತ ಅನ್ನೋ ಕಾರಣಕ್ಕೆ ತಿಂಗಳ ಹಿಂದೆ ರೋಹನ್‌ಗೆ ಕಾರ್ತಿಕ್ ಎಂಬ ಗೆಳೆಯ ಲೇ ಎಂದಿದ್ದ. ಅದೇ ಸಿಟ್ಟಿನಿಂದ ಕಾರ್ತಿಕ್‌ನನ್ನು ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ತಲೆ, ಕೈ, ದೇಹದ ಭಾಗಕ್ಕೆ ಗಂಭೀರ ಗಾಯವಾಗಿದೆ. ಅಷ್ಟೇ ಅಲ್ಲ ಎದೆ, ಕುತ್ತಿಗೆ ಕಚ್ಚಿ ಪುಡಿರೌಡಿ ಗ್ಯಾಂಗ್ ವಿಕೃತಿ ಮೆರೆದಿದೆ.
ಗಂಭೀರ ಗಾಯಗೊಂಡ ಯುವಕನನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಾವೇದ್ ಸಿರಾಜ್ ಬ್ಯಾಳಿರೊಟ್ಟಿ, ಯಶವಂತ ನಿರಂಜನ ಹಡಗಲಿಮಠ, ರೋಹನ್ ಹನುಮಂತ ವಿರಾಪೂರ, ಅಜಿತ ಶಂಕ್ರಪ್ಪ ನಿಡಗುಂದಿ ಹಾಗೂ ರಾಘವೇಂದ್ರ ಬಸವರಾಜ್ ಭಜಂತ್ರಿ ಎಂಬ ಪುಡಿರೌಡಿಗಳಿಂದ ಹಲ್ಲೆ ನಡೆದಿದೆ. ಚಹಾ ಕುಡಿಯೋನ ಬಾ ಅಂತ ಮನೆಗೆ ಬಂದು ಕರೆದೊಯ್ದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಡಾವಣೆ ಪೊಲೀಸರಿಂದ ಐವರನ್ನು ಬಂಧನ ಮಾಡಲಾಗಿದೆ. ಬಡಾವಣೆ ಠಾಣೆಯ ಪಿಎಸ್ಐ ಮಾರುತಿ ಜೋಗದಂಡಕರ್ ನೇತೃತ್ವದ ಸಿಬ್ಬಂದಿಯಿಂದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಘಟನೆಯ ಬಗ್ಗೆ ಎಸ್ಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ.
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



