ಹಾವೇರಿ:- ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಅವಧಿ ಮುಗಿಯುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಘೋಷಿಸಬೇಕು. ಇಲ್ಲವೇ ಚುನಾವಣೆ ನಡೆಯುವವರೆಗೆ ಈಗಿರುವ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅವಧಿಯನ್ನು ಮುಂದುವರೆಸಿ ಆದೇಶ ಹೊರಡಿಸಬೇಕು ಎಂದು ಹಾನಗಲ್ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಬಿ. ಪಾಟೀಲ ಆಗ್ರಹಿಸಿದರು.
ಬುಧವಾರ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಗಳು ಇಲ್ಲದೆ ರಾಜ್ಯದಲ್ಲಿ ಪ್ರಜಾಪ್ರತಿನಿಧಿ ವ್ಯವಸ್ಥೆ ಸಂಪೂರ್ಣ ಕುಸಿತದ ಹಾದಿಯಲ್ಲಿದೆ. ವರ್ಷಗಳ ಕಾಲ ತಾಪಂ–ಜಿಪಂ ಚುನಾವಣೆ ನಡೆಸದೆ ನಿರ್ಲಕ್ಷ್ಯ ತೋರಿರುವ ರಾಜ್ಯ ಸರ್ಕಾರ, ಇದೀಗ ಗ್ರಾಮ ಪಂಚಾಯತಿಗಳನ್ನೂ ಅದೇ ಸ್ಥಿತಿಗೆ ತಳ್ಳಲು ಹೊರಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಟೀಕಿಸಿದರು.
ತಾಪಂ ಹಾಗೂ ಜಿಪಂ ಆಡಳಿತ ಇಲ್ಲದ ಪರಿಣಾಮವಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆಯೇ ದುರ್ಬಲವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಾಯವಾಗಿದೆ. ಕೇವಲ ಅಧಿಕಾರಿಗಳ ಮೂಲಕ ಜನಪರ ಆಡಳಿತ ಸಾಧ್ಯವಿಲ್ಲ. ಜನಪ್ರತಿನಿಧಿಗಳ ಮಾರ್ಗದರ್ಶನವಿಲ್ಲದೆ ನಡೆಯುವ ಆಡಳಿತವನ್ನು ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಲಾರದು ಎಂದು ಹೇಳಿದರು.
ಗ್ರಾಮ ಪಂಚಾಯತಿಗಳ ಚುನಾವಣೆ ಘೋಷಿಸದೇ, ಅಥವಾ ಈಗಿರುವ ಸದಸ್ಯರು ಹಾಗೂ ಅಧ್ಯಕ್ಷರ ಅವಧಿಯನ್ನು ಮುಂದುವರೆಸದಿದ್ದರೆ, ಜೆಡಿಎಸ್ ಪಕ್ಷ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಆರ್.ಬಿ. ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.



