ಸಹಕಾರಿ ಸಂಘ ನಂ. 2ರ ವಾರ್ಷಿಕ ಸಭೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ, ಸರಕಾರದ ಪರ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಸೇರಿದಂತೆ ಇತರೆ ಆರ್ಥಿಕ ವ್ಯವಹಾರಗಳಿಂದ ಸಂಘವು ಈ ವರ್ಷ 8.26 ಲಕ್ಷ ರೂ. ಲಾಭ ಗಳಿಸಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಂ. 2ರ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ ಹೇಳಿದರು.

Advertisement

ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಂ. 2ರ 107ನೇ ವಾರ್ಷಿಕ ಸರ್ವ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸಿಬ್ಬಂದಿಯನ್ನು ಗೊಬ್ಬರದ ವ್ಯವಹಾರ ಮಾಡಲು ತರಬೇತಿಗೆ ಕಳಿಸಲಾಗಿದ್ದು, ಮುಂದಿನ ವರ್ಷ ರಾಸಾಯನಿಕ ಗೊಬ್ಬರ ಮಾರಾಟ ಕೇಂದ್ರ ತೆರೆಯಲಾಗುವುದು. ಪಡಿತರ ನ್ಯಾಯ ಬೆಲೆ ಅಂಗಡಿಗೂ ಪರವಾನಿಗೆ ದೊರೆತಿದ್ದು, ಕೆಲವೇ ತಿಂಗಳಲ್ಲಿ ಮಾರುತಿ ನಗರದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿ. ಬೆಣಕಲ್ ವಾರ್ಷಿಕ ವರದಿಯನ್ನು ವಿವರಿಸಿ, ಆರ್ಥಿಕ ವರ್ಷದಲ್ಲಿ 2.68 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ಪ್ರಸ್ತುತ ವರ್ಷದಲ್ಲಿ 8.79 ಕೋಟಿ ವ್ಯವಹಾರವನ್ನು ಹೊಂದಿದೆ. ಸಂಘವು ಠೇವಣಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿದ್ದು, 92.26 ಲಕ್ಷ ಠೇವಣಿ ಜಮಾ ಇರುತ್ತದೆ ಎಂದು ವಿವರಿಸಿದರು.

ಕೃಷಿ ಅಧಿಕಾರಿ ರಮೇಶ ಜಟ್ಟಿ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುವ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣಗಳು ಹಾಗೂ ಕೀಟನಾಶಕಗಳ ಬಗ್ಗೆ ವಿವರಿಸಿದರು. ಹೊಸ ಸಾಲ ಕೊಡುವುದನ್ನು ನಿಲ್ಲಿಸಿರುವುದು, ರೇಷನ್ ಅಂಗಡಿ ಆರಂಭಿಸುವುದು, ಗೊಬ್ಬರ ಮಾರಾಟ ಕೇಂದ್ರ, ಪ್ರತಿ ಸದಸ್ಯರಿಗೆ ಅಡಾವೆ ಪತ್ರಿಕೆ ವಿತರಿಸುವುದು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು.

74 ವರ್ಷ ಪೂರೈಸಿದ ಹಿರಿಯ ಸದಸ್ಯರಾದ ಗವಿಶಿದ್ದಪ್ಪ ರೇವಡಿ, ಮಾಳವ್ವ ಸೋಮನಕಟ್ಟಿ, ಸೋಮಣ್ಣ ಯಲಿಶಿರುಂಜ, ಕಲ್ಲಯ್ಯ ನಾಗವಿಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಪೂರ್ವ ನಿಧನ ಹೊಂದಿದ ಸದಸ್ಯರಿಗೆ ಮೌನಾಚರಿಸಿ ಗೌರವ ಸಲ್ಲಿಸಲಾಯಿತು. ಮಂಜುನಾಥ ಗದಗಿನ ನಿರೂಪಿಸಿದರು, ಮಲ್ಲನಗೌಡ ಪಾಟೀಲ ವಂದಿಸಿದರು.


Spread the love

LEAVE A REPLY

Please enter your comment!
Please enter your name here