ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಇದೀಗ ಮತ್ತೊಂದು ಆರೋಪ ಬೆಳಕಿಗೆ ಬಂದಿದೆ. ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ನಿಂದನೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಅವರು ನಗರಸಭೆ ಆಯುಕ್ತೆ ಅಮೃತಾ, ಶಾಸಕ ಬಿ.ಎನ್. ರವಿಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಸಂಭಾಷಣೆಯ ಆಡಿಯೋ ರೆಕಾರ್ಡ್ ಇಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದ್ದಾರೆ.
ಪೌರಾಯುಕ್ತೆಗೆ ನಿಂದನೆ ಮತ್ತು ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧಿಸಲು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಶಿಡ್ಲಘಟ್ಟ ಠಾಣೆಯ ಸಿಐ ಆನಂದಕುಮಾರ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಹಾಗೂ ಸೈಬರ್ ಠಾಣೆ ಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಬಂಧನ ಭೀತಿಯಿಂದ ರಾಜೀವ್ ಗೌಡ ಪರಾರಿಯಾಗಿದ್ದು, ಆತನ ಎರಡು ಮೊಬೈಲ್‌ಗಳು ಸ್ವಿಚ್ ಆಫ್ ಆಗಿರುವುದು ಪೊಲೀಸರಿಗೆ ಮತ್ತಷ್ಟು ಶಂಕೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಇಂದಿರಾನಗರ, ಸಂಜಯ್ ನಗರ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ತಂಡಗಳಿಂದ ಶೋಧ ಕಾರ್ಯ ಮುಂದುವರೆದಿದೆ.
ಇದರ ನಡುವೆ, ರಾಜೀವ್ ಗೌಡ ಬಂಧನವಾಗದಿದ್ದರೆ ಶಿಡ್ಲಘಟ್ಟ ಬಂದ್ ನಡೆಸುವುದಾಗಿ ಎನ್ಡಿಎ ನಾಯಕರು ಎಚ್ಚರಿಕೆ ನೀಡಿರುವುದರಿಂದ, ಪ್ರಕರಣ ರಾಜಕೀಯವಾಗಿ ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡಿದೆ.
ಮತ್ತೊಂದೆಡೆ, ಪ್ರಾಣ ಬೆದರಿಕೆ ಆಡಿಯೋ ವೈರಲ್ ಆದ ಬಳಿಕ, ಸಂಬಂಧಿಕರು ಮತ್ತು ಪ್ರಭಾವಿ ಗುತ್ತಿಗೆದಾರರ ಮೂಲಕ ಪೌರಾಯುಕ್ತೆ ಅಮೃತಾ ಅವರನ್ನು ಪರೋಕ್ಷವಾಗಿ ಸಂಪರ್ಕಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. “ರಾಜಕಾರಣಿಗಳ ವಿರುದ್ಧ ನಿಲ್ಲಿಸಿದರೆ ಮುಂದಿನ ಪೋಸ್ಟಿಂಗ್‌ಗೆ ಸಮಸ್ಯೆಯಾಗಬಹುದು” ಎಂಬ ಸಂದೇಶ ನೀಡಲಾಗಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಮೃತಾ, “ನನಗೆ ಹುದ್ದೆಗಿಂತ ಆತ್ಮಗೌರವ ಮುಖ್ಯ. ಬೇಕಾದರೆ ಮತ್ತೆ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಮರಳುತ್ತೇನೆ. ಸರ್ಕಾರಿ ಸೇವೆಗೆ ಸೇರುವ ಮುನ್ನ ನಾನು ತಿಂಗಳಿಗೆ ₹3 ಲಕ್ಷ ಸಂಬಳ ಪಡೆಯುತ್ತಿದ್ದೆ. ಈ ಘಟನೆ ನನ್ನ ಕುಟುಂಬಕ್ಕೆ ತೀವ್ರ ನೋವು ತಂದಿದೆ” ಎಂದು ಹೇಳಿದ್ದಾರೆ.



