ಕಾರವಾರ/ಶಿವಮೊಗ್ಗ: ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಇದೀಗ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಹೊರಬಿದ್ದಿದೆ. ಪೋಕ್ಸೊ ಕಾಯ್ದೆಯಡಿ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹೇಶ್ ನಾಯ್ಕ್ ಪುತ್ರಿ ಸಿದ್ದಾಪುರ ಠಾಣೆಗೆ ದೂರು ಸಲ್ಲಿಸಿದ್ದು, ಬಳಿಕ ಪ್ರಕರಣವನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಗಿದೆ. ಬಾಲಕಿ ನೀಡಿರುವ ಹೇಳಿಕೆಯಲ್ಲಿ, ಶಿವಮೊಗ್ಗದಲ್ಲಿರುವ ಕಮಲಾಕರ್ ಭಟ್ ನಿವಾಸದಲ್ಲಿಯೇ ತಾಯಿ ಸುಚಿತ್ರಾ ಗೈರಾಗಿದ್ದ ಸಂದರ್ಭದಲ್ಲಿ ದೌರ್ಜನ್ಯ ನಡೆದಿರುವುದಾಗಿ ಉಲ್ಲೇಖಿಸಲಾಗಿದೆ.
ಹತ್ಯೆ ಪ್ರಕರಣದಲ್ಲಿ ಈಗಾಗಲೇ ಮೂರನೇ ಆರೋಪಿಯಾಗಿರುವ ಕಮಲಾಕರ್ ಭಟ್ ಕಾರವಾರ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ತನಿಖೆಗಾಗಿ ಸಿದ್ದಾಪುರ ಠಾಣೆ ಪೊಲೀಸರು ಅವರನ್ನು ಕರೆತಂದಿದ್ದರು. ಇದೀಗ ಪೋಕ್ಸೊ ಪ್ರಕರಣ ದಾಖಲಾಗಿರುವ ಹಿನ್ನೆಲೆ ಅವರನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಒಂದೇ ಸಮಯದಲ್ಲಿ ಹತ್ಯೆ ಹಾಗೂ ಪೋಕ್ಸೊ ಆರೋಪಗಳನ್ನು ಎದುರಿಸುತ್ತಿರುವ ಕಮಲಾಕರ್ ಭಟ್ ಪ್ರಕರಣ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಪೊಲೀಸರು ಎರಡೂ ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸಿದ್ದಾರೆ.



