ಬಿಗ್ ಬಾಸ್ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ನಟಿ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ.
ಈ ಹಿಂದೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು,
ನವೆಂಬರ್ 12 ದೂರಿನ ಆಧಾರದ ಮೇಲೆ ಕುಂಬಳಗೂಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.