ಬಿಗ್‌ಬಾಸ್ ಕನ್ನಡ ಸೀಸನ್ 12 ವಿಜೇತರಾಗಿ ಹೊರಹೊಮ್ಮಿದ ಬಳಿಕ ಗಿಲ್ಲಿ ನಟ ಕರ್ನಾಟಕದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಸಾಲಿಗೆ ಸೇರಿದ್ದಾರೆ. ರಿಯಾಲಿಟಿ ಶೋನಲ್ಲಿ ತೋರಿದ ಆತ್ಮವಿಶ್ವಾಸ, ಆಟದ ಶೈಲಿ ಮತ್ತು ವ್ಯಕ್ತಿತ್ವವೇ ಅವರಿಗೆ ಭಾರೀ ಅಭಿಮಾನಿ ಬಳಗವನ್ನು ತಂದಿದೆ. ಬಿಗ್‌ಬಾಸ್ ಗೆಲುವಿನೊಂದಿಗೆ ಗಿಲ್ಲಿಯ ವೃತ್ತಿಜೀವನವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಆದರೆ ಇದೇ ಹೊತ್ತಿನಲ್ಲಿ ಗಿಲ್ಲಿ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಗಿಲ್ಲಿ ಬಿಗ್‌ಬಾಸ್‌ಗೆ ತೆರಳುವ ಮುನ್ನ ನಟಿಸಿದ್ದ ‘ಸರ್ಕಾರಿ ಶಾಲೆ ಎಚ್8’ ಸಿನಿಮಾ ಇಂದು (ಫೆಬ್ರವರಿ 6) ಬಿಡುಗಡೆಯಾಗಿದ್ದು, ಚಿತ್ರದ ನಿರ್ಮಾಪಕರು ಗಿಲ್ಲಿ ನಟ ವಿರುದ್ಧ ಫಿಲಂ ಚೇಂಬರ್‌ಗೆ ದೂರು ದಾಖಲಿಸಿದ್ದಾರೆ.
ನಿರ್ಮಾಪಕ ತೇಜಸ್ವಿ ಎಸ್ ಅವರ ಹೇಳಿಕೆಯಂತೆ, ಗಿಲ್ಲಿಗೆ ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡಲಾಗಿತ್ತು. ಅವರು ಕೇಳಿದಷ್ಟು ಸಂಭಾವನೆಯನ್ನು ಬಿಗ್‌ಬಾಸ್‌ಗೆ ಹೋಗುವ ಮುನ್ನವೇ ಪಾವತಿಸಲಾಗಿದೆ. ಆದರೆ ಸಿನಿಮಾ ಬಿಡುಗಡೆ ಹಂತದಲ್ಲಿ ಗಿಲ್ಲಿ ಯಾವುದೇ ರೀತಿಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
“ಕರೆ ಮಾಡಿದರೆ ಫೋನ್ ಎತ್ತುತ್ತಿಲ್ಲ. ಕನಿಷ್ಠ ನಮ್ಮ ಸಿನಿಮಾದ ಬಗ್ಗೆ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಕೂಡ ಇಲ್ಲ. ಸ್ಟಾರ್ ಆದ್ಮೇಲೆ ಜವಾಬ್ದಾರಿ ಇರಬೇಕು” ಎಂದು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫಿಲಂ ಚೇಂಬರ್ ದೂರು ದಾಖಲಿಸಿಕೊಂಡಿದ್ದು, ಗಿಲ್ಲಿಯನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
‘ಸರ್ಕಾರಿ ಶಾಲೆ ಎಚ್8’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕತೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಗಿಲ್ಲಿ ಜೊತೆಗೆ ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ಕಲಾವಿದರಾದ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸ್ಟಾರ್ ಆಗುವ ಕ್ಷಣಕ್ಕಿಂತ, ಆ ಸ್ಟಾರ್‌ಡಮ್‌ನೊಂದಿಗೆ ಬರುವ ಜವಾಬ್ದಾರಿಯೇ ದೊಡ್ಡದು ಎಂಬ ಚರ್ಚೆ ಈ ಪ್ರಕರಣದೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ಆರಂಭವಾಗಿದೆ.

