ಉಡುಪಿ: ಉಡುಪಿಯ ಮಲ್ಪೆ ವ್ಯಾಪ್ತಿಯ ಕೋಡಿಬೆಂಗ್ರೆಯಲ್ಲಿರುವ ಡೆಲ್ಟಾ ಬೀಚ್ ಸಮೀಪ ನಡೆದ ಪ್ರವಾಸಿ ಬೋಟ್ ದುರಂತ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೋರ್ವ ಯುವತಿ ಸಾವನ್ನಪ್ಪಿದ್ದಾರೆ.
ಮೈಸೂರಿನ ದಿಶಾ (23) ಮೃತ ಯುವತಿ ಎಂದು ಗುರುತಿಸಲಾಗಿದೆ. ಈ ಮೂಲಕ ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ನಿನ್ನೆ ನಡೆದ ಅಪಘಾತದಲ್ಲಿ ಶಂಕರಪ್ಪ (22) ಹಾಗೂ ಸಿಂಧು (23) ಎಂಬುವವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿರುವ ಧರ್ಮರಾಜ್ ಎಂಬ ಯುವಕನಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬೀಚ್ ದೃಶ್ಯಗಳು ಭೂಲೋಕದ ಸ್ವರ್ಗದಂತೆ ಕಾಣುತ್ತವೆ. ಇದೇ ಆಕರ್ಷಣೆಯಿಂದ ಮೈಸೂರಿನ ಬಿಪಿಒ ಕಾಲ್ ಸೆಂಟರ್ನ 28 ಮಂದಿ ಯುವಕ–ಯುವತಿಯರ ಪ್ರವಾಸಿ ತಂಡ ಮೋಜು ಮಾಡಲು ಉಡುಪಿಗೆ ಆಗಮಿಸಿತ್ತು. ಆದರೆ ಅವರ ಪ್ರವಾಸವೇ ದುರಂತದಲ್ಲಿ ಅಂತ್ಯಗೊಂಡಿದೆ.
ಡೆಲ್ಟಾ ಬೀಚ್ ಸಮೀಪ ಎರಡು ಪ್ರವಾಸಿ ಬೋಟುಗಳಲ್ಲಿ 28 ಮಂದಿ ಕಡಲಿಗೆ ಇಳಿದಿದ್ದರು. ಭದ್ರತಾ ದೃಷ್ಟಿಯಿಂದ ಎಲ್ಲರಿಗೂ ಲೈಫ್ ಜಾಕೆಟ್ ನೀಡಲಾಗಿದ್ದರೂ, ಕೆಲವರು ಮಾತ್ರ ಜಾಕೆಟ್ ಧರಿಸಿದ್ದು, ಇನ್ನು ಕೆಲವರು ನಿರ್ಲಕ್ಷ್ಯದಿಂದ ಧರಿಸದೆ ಬೋಟ್ ಹತ್ತಿದ್ದರು ಎನ್ನಲಾಗಿದೆ. ಕಡಲಿನಲ್ಲಿ ಬೋಟ್ ಸಾಗುತ್ತಿದ್ದಾಗ ಕೆಲ ಪ್ರವಾಸಿಗರು ಕುಣಿದು ಹಾರಾಟ ನಡೆಸಿದ್ದು, ಇದರಿಂದ ಬೋಟ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳೀಯ ಮೀನುಗಾರರಾದ ನಾಗರಾಜ, ವಿಶ್ವನಾಥ್ ಶ್ರೀಯಾನ್ ಹಾಗೂ ದಿನೇಶ್ ಕರ್ಕೆರ ಅವರು ಮತ್ತೊಂದು ಬೋಟಿನ ಮೂಲಕ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗಿದವರನ್ನು ರಕ್ಷಣೆ ಮಾಡಿದ್ದಾರೆ.
ಲೈಫ್ ಜಾಕೆಟ್ ಧರಿಸಿದ್ದ ಹಲವರನ್ನು ಸುಲಭವಾಗಿ ಮೇಲಕ್ಕೆತ್ತಿ ಸುರಕ್ಷಿತವಾಗಿ ಇನ್ನೊಂದು ಬೋಟಿಗೆ ಸ್ಥಳಾಂತರಿಸಲಾಯಿತು. ನೀರಿನಲ್ಲಿ ಬಿದ್ದ 14 ಮಂದಿಯ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಶಂಕರಪ್ಪ ಹಾಗೂ ಸಿಂಧು ನಿನ್ನೆ ಮೃತಪಟ್ಟರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ದಿಶಾ ಕೊನೆಯುಸಿರೆಳೆದಿದ್ದಾರೆ. ಈ ದುರಂತದಿಂದ ಪ್ರವಾಸಿಗರ ಕುಟುಂಬಗಳಲ್ಲಿ ಶೋಕದ ವಾತಾವರಣ ಆವರಿಸಿದೆ.



