ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಟೀಸರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದೊಡ್ಡ ವಿವಾದಕ್ಕೆ ಸಿಲುಕಿದೆ. ಅಡಲ್ಟ್ ದೃಶ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ದೃಶ್ಯಗಳ ಕಾರಣಕ್ಕೆ ಕ್ರೈಸ್ತ ಸಮುದಾಯದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರ ಟೀಸರ್ನಲ್ಲಿ ನಾಯಕ ರಾಯ ಕಾರಿನೊಳಗೆ ಲೈಂಗಿಕ ಕ್ರಿಯೆ ನಡೆಸುವ ದೃಶ್ಯ ಕಾಣಿಸುತ್ತದೆ. ಕಾರು ಅಲುಗಾಡಿ ಡೆಟೋನೇಟರ್ ಸಕ್ರಿಯವಾಗಿ ಬಾಂಬ್ ಸ್ಫೋಟಗೊಳ್ಳುವ ಸನ್ನಿವೇಶವೂ ಇದೆ. ಈ ದೃಶ್ಯ ದೇವದೂತ ಸಂತ ಮಿಕಯೇಲ್ ಮೂರ್ತಿಯ ಹಿನ್ನೆಲೆಯಲ್ಲೇ ತೋರಿಸಲಾಗಿದೆ ಎಂಬುದು ದೂರುದಾರರ ಆರೋಪ.
ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದೆ. “ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಟೀಸರ್ನ್ನು ತಕ್ಷಣ ತೆಗೆದುಹಾಕಬೇಕು” ಎಂದು ಒತ್ತಾಯಿಸಲಾಗಿದೆ. ಅಲ್ಲದೆ, ಸಾರ್ವಜನಿಕ ಕ್ಷಮೆಯಾಚನೆ ಮಾಡದಿದ್ದರೆ ಕಾನೂನು ಹೋರಾಟ ಅನಿವಾರ್ಯ ಎಂದು ಎಚ್ಚರಿಸಲಾಗಿದೆ.
ಸಾಮಾನ್ಯವಾಗಿ ಈ ರೀತಿಯ ವಿವಾದಗಳು ಸೆನ್ಸಾರ್ ಹಂತದಲ್ಲಿ ಗಂಭೀರ ಚರ್ಚೆಗೆ ಕಾರಣವಾಗುತ್ತವೆ. ‘ಟಾಕ್ಸಿಕ್’ ಚಿತ್ರದ ಭವಿಷ್ಯವೂ ಇದೇ ರೀತಿಯ ಪರೀಕ್ಷೆಗೆ ಒಳಗಾಗುತ್ತದೆಯೇ ಎಂಬ ಪ್ರಶ್ನೆ ಈಗ ಸಿನಿ ವಲಯದಲ್ಲಿ ಮೂಡಿದೆ.



