ಬೆಂಗಳೂರು: ಡ್ರಿಫ್ಟಿಂಗ್ ಪ್ರಕರಣದ ಬೆನ್ನಲ್ಲೇ, ರಿಕ್ಕಿ ರೈ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ. ಕಾರು ರಿಜಿಸ್ಟರ್ ಮಾಡದೇ, ಅದರ ಬಣ್ಣ ಬದಲಿಸಿ, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ತಪ್ಪಿಸಿದ ಆರೋಪ ಕೇಳಿ ಬಂದಿದೆ.
ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಡ್ರಿಫ್ಟಿಂಗ್ ಪ್ರಕರಣದ ತನಿಖೆ ವೇಳೆ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ದೆಹಲಿಯ ಆರ್‌ಟಿಓ ಹರಾಜಿನಲ್ಲಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರಿಗೆ ನಂತರ ಬಣ್ಣ ಬದಲಿಸಿ, KA 05 XX 0009 ರೀತಿಯ ಫ್ಯಾನ್ಸಿ ನಂಬರ್ ಪಡೆದುಕೊಂಡಿರುವುದು ತಿಳಿದುಬಂದಿದೆ. ಆದರೆ, ಸರಿಯಾದ ರೀತಿಯಲ್ಲಿ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದರೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸಬೇಕಾಗಿತ್ತು.
ಈ ಕ್ರಮವನ್ನು ತಪ್ಪಿಸಲು ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಇದೇ ಕಾರಣದಿಂದ ಕಾರಿನ ನಂಬರ್ ಪತ್ತೆಯಾಗಿದ್ದರೂ ಸಹ ಆರಂಭದಲ್ಲಿ ಮಾಲೀಕರ ಗುರುತು ಪತ್ತೆಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ನೀಡಿದ ದೂರಿನನ್ವಯ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ನಡೆದ ಡ್ರಿಫ್ಟಿಂಗ್ ಸ್ಥಳ ಪರಿಶೀಲನೆಗೆ ಪೊಲೀಸರು ನೋಟಿಸ್ ನೀಡಿದರೂ, ಈವರೆಗೆ ರಿಕ್ಕಿ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಸ್ತುತ ಕಾನೂನು ಸುವ್ಯವಸ್ಥೆ ಪೊಲೀಸರು ತನಿಖೆ ಮುಂದುವರಿಸಿದ್ದು, ಸಂಬಂಧಿತ ಕಾರು ಸಂಚಾರ ಪೊಲೀಸರ ವಶದಲ್ಲಿದೆ.



