ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನನಾಯಗನ್’ ಸಿನಿಮಾದ ಬಿಡುಗಡೆ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಮದ್ರಾಸ್ ಹೈಕೋರ್ಟ್ ಜನವರಿ 21ರವರೆಗೆ ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಿದೆ.
ಈ ಹಿಂದೆ ‘ಜನನಾಯಗನ್’ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡುವಂತೆ ಹೈಕೋರ್ಟ್ ಸಿಬಿಎಫ್ಸಿಗೆ ಸೂಚನೆ ನೀಡಿತ್ತು. ಆದರೆ ಆ ಆದೇಶದ ವಿರುದ್ಧ ಸಿಬಿಎಫ್ಸಿ ಮೇಲ್ಮನವಿ ಸಲ್ಲಿಸಿ, ಚಿತ್ರದ ಕೆಲವು ದೃಶ್ಯಗಳು ಮತ್ತು ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಲಾಂಛನಗಳ ಕುರಿತು ತಜ್ಞರ ಪರಿಶೀಲನೆ ಅಗತ್ಯವಿದೆ ಎಂದು ವಾದ ಮಂಡಿಸಿತು.
ಈ ಹಿನ್ನೆಲೆಯಲ್ಲಿ ನಡೆದ ಹೊಸ ವಿಚಾರಣೆಯ ನಂತರ, ಹೈಕೋರ್ಟ್ ಜ.21ರವರೆಗೆ ಸಿನಿಮಾ ಬಿಡುಗಡೆಗೆ ತಡೆ ವಿಧಿಸಿದೆ. ಅಗತ್ಯ ಬದಲಾವಣೆಗಳನ್ನು ಮಾಡಿದ ಬಳಿಕವೇ ಪ್ರಮಾಣಪತ್ರ ನೀಡಬೇಕು ಎಂಬುದಾಗಿ ಸಿಬಿಎಫ್ಸಿಗೆ ಸೂಚನೆ ನೀಡಲಾಗಿದೆ.
ಈಗಾಗಲೇ ಜನವರಿ 7ರಂದು ನಿರ್ಮಾಣ ಸಂಸ್ಥೆ ಸಿನಿಮಾ ಬಿಡುಗಡೆ ಮುಂದೂಡಿರುವುದಾಗಿ ಘೋಷಿಸಿತ್ತು. ಜನವರಿ 9ರಂದು ವಿಶ್ವದಾದ್ಯಂತ ರಿಲೀಸ್ ಆಗಬೇಕಿದ್ದ ‘ಜನನಾಯಗನ್’, ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ ಎಂದು ತಿಳಿಸಲಾಗಿತ್ತು. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ತಂಡ ಹೇಳಿದೆ.
ಪೊಂಗಲ್ ಹಬ್ಬದ ಸಂಭ್ರಮದ ನಡುವೆ ವಿಜಯ್ ಅಭಿಮಾನಿಗಳಿಗೆ ಈ ಬೆಳವಣಿಗೆ ಭಾರೀ ನಿರಾಸೆ ಮೂಡಿಸಿದ್ದು, ಮುಂದಿನ ತೀರ್ಪಿನತ್ತ ಎಲ್ಲರ ದೃಷ್ಟಿ ನೆಟ್ಟಿದೆ.



