ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಒಂದರ ಹಿಂದೊದರಂತೆ ವಿಘ್ನಗಳು ಎದುರಾಗುತ್ತಿದೆ. ಈ ಹಿಂದೆ ಕಾಂತಾರ ಸಿನಿಮಾದ ಇಬ್ಬರು ಕಲಾವಿಧರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಕಾಂತಾರ ಚಿತ್ರದ ಮತ್ತೋರ್ವ ಕಲಾವಿದ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಜೂನಿಯರ್ ಕಲಾವಿದರಾಗಿ ನಟಿಸುತ್ತಿದ್ದ ಕೇರಳದ ತ್ರೀಶೂರ್ ನ ವಿಜು ವಿಕೆ ಎಂಬುವವರು ಮೃತಪಟ್ಟಿದ್ದಾರೆ. ಮೃತ ವಿಜು ವಿಕೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಗಾಗಿ ಕರ್ನಾಟಕಕ್ಕೆ ಬಂದಿದ್ದರು. ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರಂದು ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ನಿಧನ ಹೊಂದಿದ್ದಾರೆ.
ಈ ಮೊದಲ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ನಿಧನ ಹೊಂದಿದ್ದರು. ಇದಾದ ಬಳಿಕ ಚಿತ್ರದ ಕಲಾವಿದ ರಾಕೇಶ್ ಪೂಜಾರಿ ಮೃತಪಟ್ಟರು. ಈಗ ಸಿನಿಮಾದ ಮತ್ತೋರ್ವ ಜೂನಿಯರ್ ಕಲಾವಿದ ಕೊನೆಯುಸಿರು ಎಳೆದಿದ್ದಾರೆ. ಈ ಮೂಲಕ ಕೆಲವೇ ತಿಂಗಳ ಅಂತರದಲ್ಲಿ ಚಿತ್ರದ ಮೂವರು ಮೃತಪಟ್ಟಿದ್ದಾರೆ.