ಬೆಂಗಳೂರು:- ಮೆಟ್ರೋ ದರ ಏರಿಕೆಯ ಶಾಕ್ ನಿಂದ ಹೊರ ಬರುವ ಮೊದಲೇ ಈಗ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು, ಬಸ್ ಹಾಗೂ ಮೆಟ್ರೋ ದರದ ಹೆಚ್ಚಳದ ಬೆನ್ನಲ್ಲೇ ಬೆಂಗಳೂರಿನ ಆಟೋ ಮೀಟರ್ ದರ ಏರಿಕೆಗೆ ಚಿಂತನೆ ನಡೆದಿದೆ. ಇಂದು ಆಟೋ ದರ ಏರಿಕೆ ಸಂಬಂಧ ಸಾರಿಗೆ ಇಲಾಖೆಯು ಆಟೋ ಚಾಲಕ ಸಂಘಟನೆ ಜೊತೆ ಸಭೆ ನಡೆಸಲಿದ್ದು, ಒಂದು ವೇಳೆ ದರ ಏರಿಕೆ ನಿರ್ಧಾರ ಮಾಡಿದ್ರೆ ಜನರಿಗೆ ಹೊಡೆತ ಬೀಳಲಿದೆ.
ಈಗ 2 ಕಿಮೀಗೆ ಮಿನಿಮಮ್ ದರ 30 ರೂ. ಇದೆ. ಸದ್ಯ 30 ರೂ.ನಿಂದ 40 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಆಟೋ ಚಾಲಕ ಸಂಘಟನೆ ಮುಖ್ಯಸ್ಥರ ಜೊತೆ ಸಭೆ ಮಾಡಲಿದ್ದಾರೆ. ಚಾಲಕ ಸಂಘಟನೆಯ ಒಟ್ಟು ಅಭಿಪ್ರಾಯ ಪಡೆದು ದರ ಏರಿಕೆಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಸಭೆಯಲ್ಲಿ ದರ ಏರಿಕೆಯ ಪ್ರಸ್ತಾಪವನ್ನು ಸಿದ್ಧಮಾಡಿ ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಲಾಗುತ್ತದೆ. ಒಂದು ವಾರದಲ್ಲಿ ಬಹುತೇಕ ಪರಿಷ್ಕೃತ ದರ ಪ್ರಕಟವಾಗುವ ಸಾಧ್ಯತೆ ಇದೆ.
2021 ರಲ್ಲಿ ದರ ಪರಿಷ್ಕರಣೆ ಆಗಿತ್ತು. ಈಗ ಮತ್ತೆ ಆಟೋ ದರ ಏರಿಕೆಗೆ ಸಜ್ಜಾಗಿದೆ. ಒಟ್ಟಾರೆ ದರ ಏರಿಕೆಯ ಬಿಸಿ ಜನರ ಜೇಬುನ್ನು ನಿರಂತರವಾಗಿ ಸುಡಲಿದೆ. ಇತ್ತ ಸಭೆಗೂ ಮುನ್ನ ಅನೇಕ ಸಂಘಟನೆಗಳು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿವೆ.