ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಆಸ್ತಿ ನೋಂದಣಿ ಶುಲ್ಕ ಏರಿಕೆ ಮಾಡಲಾಗಿದೆ. ಇಂದಿನಿಂದ ರಾಜ್ಯದ ಆಸ್ತಿ ನೋಂದಣಿ ದುಪ್ಪಟ್ಟು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೌದು ಆಸ್ತಿ ಖರೀದಿ ನೋಂದಣಿ ಶುಲ್ಕವನ್ನು ಹಿಂದಿನ ದರಕ್ಕಿಂತ ದುಪ್ಪಟ್ಟು ದರಕ್ಕೆ ಏರಿಕೆ ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುದ್ರಾಂಕ, ನೋಂದಣಿ ಹಾಗೂ ಇತರೆ ಸೆಸ್ ಸೇರಿ ಕರ್ನಾಟಕ ರಾಜ್ಯವು ಶೇ.6.6 ರಷ್ಟು ಶುಲ್ಕ ವಿಧಿಸುತ್ತಿತ್ತು.
ಇದೇ ಅವಧಿಯಲ್ಲಿ ಈ ಶುಲ್ಕವು ತಮಿಳುನಾಡಿನಲ್ಲಿ ಶೇ.9, ಕೇರಳದಲ್ಲಿ ಶೇ.10, ಆಂಧ್ರಪ್ರದೇಶದಲ್ಲಿ ಶೇ. 7.5, ತೆಲಂಗಾಣ ರಾಜ್ಯಗಳು ಶೇ.7.5 ರಷ್ಟು ಶುಲ್ಕ ಆಕರಿಸುತ್ತಿವೆ. ದಸ್ತಾವೇಜುಗಳ ಮೇಲಿನ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಇತರೆ ರಾಜ್ಯಗಳೊಂದಿಗೆ ಸಮೀಕರಿಸಿಗೊಳ್ಳಲು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ನಾಗರಿಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆಯನ್ನು ನೀಡಲು ರಾಜ್ಯ ಸರ್ಕಾರವು 31-08-2025 ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕವನ್ನು ಶೇ. 1 ರಿಂದ ಶೇ.2 ರಷ್ಟು ಪರಿಷ್ಕರಿಸಿದೆ ಎಂದು ಹೇಳಿದ್ದಾರೆ.
ಪರಿಷ್ಕೃತ ನೋಂದಣಿ ಶುಲ್ಕವನ್ನು ಸುಗಮವಾಗಿ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಬೇಕು. ಹಿಂದಿನ ನೋಂದಣಿ ಶುಲ್ಕವನ್ನು ಪಾವತಿಸಿ ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಅಪಾಯಿಂಟ್‌ಮೆಂಟ್ ಪಡೆದಿರುವವರು ಅಥವಾ ಶುಲ್ಕವನ್ನು ಪಾವತಿಸಿ ಅಪಾಯಿಂಟ್‌ಮೆಂಟ್ ಪಡೆಯದಿರುವವರು, ವ್ಯತ್ಯಾಸದ ಮೊತ್ತವನ್ನು ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಬೇಕು. ಮೊದಲು ಬಳಸಿದ ಲಾಗಿನ್ ಮೂಲಕವೇ ಈ ಪಾವತಿಯನ್ನು ಮಾಡಬೇಕು.
ಅರ್ಜಿದಾರರಿಗೆ ನೆರವಾಗುವ ದೃಷ್ಟಿಯಿಂದ ಅಗತ್ಯ ಸೂಚನೆಗಳನ್ನು ಒಳಗೊಂಡ ಎಸ್‌ಎಂಎಸ್ ನೇರವಾಗಿ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು. ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಸಲ್ಲಿಸಲಾಗಿರುವ ಹಾಗೂ ಪರಿಶೀಲನೆಯಲ್ಲಿರುವ ದಸ್ತಾವೇಜುಗಳಿಗೆ ನೋಂದಣಿ ಶುಲ್ಕವನ್ನು ಮರು ಲೆಕ್ಕ ಹಾಕಲಾಗುವುದು ಮತ್ತು ಪರಿಷ್ಕೃತ ಶೇ.2 ರಂತೆ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ವರ್ಗದ ಅರ್ಜಿದಾರರಿಗೆ ಪಾವತಿಯ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ಪರಿಷ್ಕೃತ ನೋಂದಣಿ ಶುಲ್ಕದ ವಿವರವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.


