ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮದಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಕರ್ನಾಟಕ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಸದ್ಯಕ್ಕೆ ಹೋಟೆಲ್‌ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ತೈಲ ಪೂರೈಕೆ ಕಂಪನಿಗಳೊಂದಿಗೆ ಇಂದು ನಡೆದ ಮಹತ್ವದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಎರಡನೇ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಬರೆಯುತ್ತಿದ್ದಾರೆ ಎಂದು ಹೇಳಿದರು. ಪರಿಸ್ಥಿತಿ ಗಂಭೀರವಾಗಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಸೆಕ್ರೆಟರಿ, ಕಮಿಷನರ್ ಹಾಗೂ ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಸುಮಾರು ಒಂದು ಗಂಟೆ ಕಾಲ ಸಭೆ ನಡೆಯಿತು. ಗ್ರಾಹಕರು ಅನಾವಶ್ಯಕ ಆತಂಕಕ್ಕೆ ಒಳಗಾಗಬಾರದು. ಗ್ಯಾಸ್ ಡಬಲ್ ಬುಕ್ಕಿಂಗ್ ಮಾಡಬೇಡಿ ಹಾಗೂ ಮಿತವಾಗಿ ಬಳಕೆ ಮಾಡುವಂತೆ ಸಚಿವರು ಸಾರ್ವಜನಿಕರಿಗೆ ಮನವಿ ಮಾಡಿದರು.
ಹಡಗುಗಳ ಸಂಚಾರ ಈಗಾಗಲೇ ಆರಂಭವಾಗಿದ್ದು, ಅಗತ್ಯ ಸೇವಾ ವಲಯಗಳಿಗೆ ಗ್ಯಾಸ್ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್ ಹಾಗೂ ರೈಲ್ವೆ ಕ್ಯಾಂಟೀನ್‌ಗಳಿಗೆ ಶೇ.100ರಷ್ಟು ಸಿಲಿಂಡರ್ ಪೂರೈಕೆ ಮಾಡಲು ಒಪ್ಪಿಗೆ ನೀಡಲಾಗಿದೆ.
ಪ್ರತಿದಿನ ಸುಮಾರು 6,500 ಸಿಲಿಂಡರ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರಲ್ಲಿ 4,200 ಸಿಲಿಂಡರ್‌ಗಳನ್ನು ಅಗತ್ಯ ಸೇವಾ ವಲಯಕ್ಕೆ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಇಂದಿರಾ ಕ್ಯಾಂಟೀನ್‌ಗಳಿಗೆ ಸುಮಾರು 4,200 + 1,200 ಸಿಲಿಂಡರ್‌ಗಳನ್ನು ನೀಡಲಾಗುತ್ತದೆ.
ಜೊತೆಗೆ ಅಗತ್ಯ ಸೇವಾ ವಲಯಕ್ಕೆ 5,200 ಸಿಲಿಂಡರ್ ಹಾಗೂ ಆಟೋಗಳಿಗೆ 2,250 ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಆದರೆ ಸದ್ಯಕ್ಕೆ ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆ ಇರುವುದಿಲ್ಲ. ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ಎಲೆಕ್ಟ್ರಿಕ್ ಸ್ಟವ್ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದ್ದಾರೆ.



