ಚಾಮರಾಜನಗರ:– ಮಾದಪ್ಪನ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.
ಹುಲಿಯನ್ನು ಮೂರು ಭಾಗವಾಗಿ ಕತ್ತರಿಸಿ ಹತ್ಯೆ ಮಾಡಿರುವ ಪ್ರಕರಣದ ಇಬ್ಬರು ಶಂಕಿತರನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆದಿದ್ದು, ಶೀಘ್ರವೇ ಹುಲಿ ಹತ್ಯೆಗೆ ನೈಜ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮೈಸೂರು ವಿಭಾಗದ ಅರಣ್ಯಾಧಿಕಾರಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ಈಗಾಗಲೇ ವನ್ಯಜೀವಿ ಮಂಡಳಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ತಿಳಿಸಿದರು.
ಅರಣ್ಯ ಪ್ರದೇಶದೊಳಗೆ ಇರುವ ಹಾಡಿಗಳಲ್ಲಿರುವ ದನಕರುಗಳೆಷ್ಟು? ಈ ಹಾಡಿಗಳಲ್ಲಿ ಎಷ್ಟು ಜನರಿದ್ದಾರೆ? ಎಂಬ ಬಗ್ಗೆ ಸಂಪೂರ್ಣ ದತ್ತಾಂಶ ಕಲೆ ಹಾಕಿ ದಾಖಲಿಸಲು ಮತ್ತು ಒಂದೊಮ್ಮೆ ಹಾಡಿಯಲ್ಲಿರುವ ದನಕರುಗಳು ವನ್ಯಜೀವಿಯಿಂದ ಮೃತಪಟ್ಟರೆ ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚಿಸಿದರು.