ಬೆಂಗಳೂರು: ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ.
ಮಂಗಳವಾರ ಯೆಲ್ಲೋ ಲೈನ್ಗೆ 6ನೇ ರೈಲು ಸೇರ್ಪಡೆಯಾಗಲಿದ್ದು, ಇದರೊಂದಿಗೆ ಸೋಮವಾರದಿಂದ ಶನಿವಾರದವರೆಗೆ ಜನದಟ್ಟನೆಯ ಅವಧಿಯಲ್ಲಿ ಮೆಟ್ರೋ ಸೇವೆಗಳು ಈಗಿರುವ 15 ನಿಮಿಷಗಳ ಅಂತರದ ಬದಲು 13 ನಿಮಿಷಗಳಿಗೊಮ್ಮೆ ಸಂಚರಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.
ಭಾನುವಾರಗಳಲ್ಲಿ ಪೀಕ್ ಅವಧಿಯ ಸೇವಾ ಅವಧಿ 15 ನಿಮಿಷಗಳಾಗಿಯೇ ಮುಂದುವರಿಯಲಿದ್ದು, ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ಟರ್ಮಿನಲ್ಗಳಿಂದ ಮೊದಲ ಹಾಗೂ ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಈ ಯೆಲ್ಲೋ ಲೈನ್ ಆರ್.ವಿ. ರಸ್ತೆ–ಬೊಮ್ಮಸಂದ್ರ ನಡುವಿನ ಸಂಪರ್ಕವನ್ನು ಒದಗಿಸುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ.



