ಪತ್ನಿಯನ್ನೇ ಅಪಹರಣ ಮಾಡಿದ ಆರೋಪ ಎದುರಿಸುತ್ತಿರುವ ಸಿನಿಮಾ ನಿರ್ಮಾಪಕ ಹರ್ಷವರ್ಧನ್ ಇದೀಗ ಹಳೆಯ ಕಳ್ಳತನ ಪ್ರಕರಣದಲ್ಲಿ ಉತ್ತರ ಕನ್ನಡ ಪೊಲೀಸರ ವಶವಾಗಿದ್ದಾರೆ. ಹಾಸನ ಮೂಲದ ಹರ್ಷವರ್ಧನ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
2017ರಲ್ಲಿ ಸಿದ್ದಾಪುರ ತಾಲೂಕಿನ ಹಲಗೇರಿ ಸಮೀಪದ ಕುಂಬಾರಕುಳಿ ಎಂಬ ಮನೆಯ ಬಾಗಿಲು ಮುರಿದು ಬಂಗಾರ ಕಳ್ಳತನ ಮಾಡಿದ ಆರೋಪ ಹರ್ಷವರ್ಧನ್ ಮೇಲೆ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದರೂ, ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಪ್ರಕರಣ ಸಂಬಂಧ ಸಿದ್ದಾಪುರ ಕೋರ್ಟ್ನಿಂದ ಹತ್ತು ಬಾರಿ ವಾರೆಂಟ್ ಜಾರಿಯಾಗಿದ್ದರೂ ಹರ್ಷವರ್ಧನ್ ಗೈರಾಗಿಯೇ ಮುಂದುವರಿದಿದ್ದರು.
ನ್ಯಾಯಾಲಯದ ಆದೇಶದ ಮೇರೆಗೆ ಡಿಸೆಂಬರ್ 17ರಂದು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಅವರನ್ನು ಬಂಧಿಸಲಾಗಿದ್ದು, ಇಂದು ಸಿದ್ದಾಪುರ ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಷವರ್ಧನ್ ‘ನಿನ್ನಲ್ಲೇನೋ ಹೇಳಬೇಕು’ ಸಿನಿಮಾ ನಿರ್ಮಿಸಿದ್ದರು. ಇದೇ ಸಿನಿಮಾದ ನಟಿ ಚೈತ್ರಾಳನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಓರ್ವ ಮಗಳಿದ್ದಾಳೆ. ದಾಂಪತ್ಯದಲ್ಲಿ ವಿರಸ ಉಂಟಾದ ಹಿನ್ನೆಲೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು. ಮಗಳ ವಿಚಾರವಾಗಿ ಪತ್ನಿಯನ್ನೇ ಅಪಹರಣ ಮಾಡಿದ್ದ ಆರೋಪವೂ ಹರ್ಷವರ್ಧನ್ ವಿರುದ್ಧ ದಾಖಲಾಗಿದೆ. ನಿರಂತರ ಪ್ರಕರಣಗಳು ಹರ್ಷವರ್ಧನ್ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿವೆ.



