ಹಾಸನ: ಹಾಸನ ಜಿಲ್ಲೆಯಲ್ಲಿ ಕಳೆದ 40 ದಿನದಲ್ಲಿ ಸಾಕಷ್ಟು ಜನರು ಹೃದಯಾಘಾತದಿಂದ ಮರಣ ಅಪ್ಪಿರುವ ಸಂಗತಿ ಬಹಳ ಆಶ್ಚರ್ಯ ಮೂಡಿಸಿದೆ. ಮೃತಪಟ್ಟವರು ವಯಸ್ಸಾದವರಷ್ಟೇ ಅಲ್ಲ, ಸಣ್ಣ ವಯಸ್ಸಿನವರೂ ಸೇರಿ ಎಲ್ಲಾ ವಯೋಮಾನದವರೂ ಇದ್ದಾರೆ. ಇದೀಗ ಮತ್ತೋರ್ವ ಯುವಕ , ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂಜಯ್ (27) ಮೃತ ಯುವಕನಾಗಿದ್ದು,. ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಸಂಜಯ್ ಸೋಮವಾರ ಸಂಜೆ ಎದೆನೋವು ಎಂದು ಸೋಮನಹಳ್ಳಿ ಪ್ರಾಥಮಿಕ ಆಸ್ಪತ್ರೆಗೆ ಹೋಗಿದ್ದ. ನಡೆಯಲೂ ಆಗದ ಸ್ಥಿತಿಯಲ್ಲಿ ಸಂಜಯ್‌ನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದರು. ಕೂಡಲೇ ವೈದ್ಯರು ಯುವಕನ ಬಿಪಿ ಪರೀಕ್ಷೆ ಮಾಡಿದ್ದರು.
ಈ ವೇಳೆ 220ಕ್ಕೂ ಅಧಿಕ ಪ್ರಮಾಣದಲ್ಲಿ ಬಿಪಿ ಇದ್ದ ಬಗ್ಗೆ ಮಾಹಿತಿ ಲಭಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ರೆಫರ್ ಮಾಡುವ ವೇಳೆಯೇ ಯುವಕ ಹಠಾತ್ ಸಾವನ್ನಪ್ಪಿದ್ದಾನೆ. ಸಂಜಯ್ ಸಾವಿನ ಬಗ್ಗೆ ಸಂಬಂಧಿಕರು ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಹಳ್ಳಿ ಮೈಸೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಕೇಸ್ ದಾಖಲಾಗಿದೆ.