ಪ್ರವಚನಗಳಿಂದ ಬದುಕಿನ ಸಮಸ್ಯೆಗೆ ಉತ್ತರ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಗತ್ತಿನಲ್ಲಿ ಎಲ್ಲ ಪ್ರಾಣಿಗಳಿಗಿಂತ ಹೆಚ್ಚು ವಿಚಾರ ಶಕ್ತಿ ಹೊಂದಿರುವ ಪ್ರಾಣಿಯೆಂದರೆ ಅದು ಮನುಷ್ಯ. ಪುರಾಣ, ಪ್ರವಚನಗಳು ಮನುಷ್ಯನಲ್ಲಿ ವಿಚಾರಗಳ ಪ್ರಚೋದನೆಯನ್ನು ಮಾಡುತ್ತವೆ. ಇದರಿಂದ ಆತನ ದೈನಂದಿನ ಬದುಕಿನ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ ಎಂದು ರೋಣ ಗುಲಗಂಜಿ ಮಠದ ಶ್ರೀ ಗುರುಪಾದ ಸ್ವಾಮೀಜಿ ಹೇಳಿದರು.

Advertisement

ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವದ ಶನಿವಾರ ಸಂಜೆಯ ಪ್ರವಚನದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹದ ಮೂಲಕ ಜರುಗುತ್ತಿರುವುದು ಸಂತಸದ ವಿಷಯ. ಮನುಷ್ಯ ಯಾವಾಗ ಮೊದಲನೇ ಸಾವನ್ನು ಕಂಡನೋ ಅಂದಿನಿಂದ ಅವನಲ್ಲಿ ಜಿಜ್ಞಾಸೆ ಪ್ರಾರಂಭವಾಯಿತು. ಎಂದಾದರೂ ಒಂದು ದಿನ ನಾನೂ ಸಾಯುತ್ತೇನೆ ಎಂಬ ಅರಿವು ಅವನಲ್ಲಿ ಮೂಡಿದಾಗ ಅಷ್ಟರೊಳಗೆ ಏನಾದರೂ ಸಾಧಿಸಬೇಕೆಂಬ ತಿಳುವಳಿಕೆ ಅವನಲ್ಲಿ ಹುಟ್ಟಿತು. ಈ ಸಾಧನೆಗೆ ಆಧ್ಯಾತ್ಮವೇ ದಾರಿ ಎಂಬುದನ್ನು ಅರಿತ ಆತ ಪುರಾಣ, ಪ್ರವಚನಗಳ ಮೂಲಕ ಅದನ್ನು ಪಡೆಯಲು ಮುಂದಾದ. ಯಾವುದೇ ಮಹಾತ್ಮರ ಪುಣ್ಯ ಪ್ರವಚನಗಳನ್ನು ಕೇಳಿದರೂ ಅದರಲ್ಲಿ ಬದುಕಿಗೆ ಮಾರ್ಗ ತೋರುವ ಅಂಶಗಳು ಇದ್ದೇ ಇರುತ್ತವೆ. ಅದರಲ್ಲಿಯೂ ಹಠಯೋಗಿ ವೀರಪ್ಪಜ್ಜನ ಪುರಾಣ ನಮ್ಮಲ್ಲಿ ಜೀವನ ಚೈತನ್ಯ ತುಂಬಲು ಸಹಾಯಕವಾಗಿದೆ ಎಂದರು.
ಜಗತ್ತಿನಲ್ಲಿ ಸೃಷ್ಟಿಯಾದ ಸಕಲ ವಸ್ತುಗಳೂ ಭಗವಂತನಿಂದಲೇ ಸೃಷ್ಟಿಯಾಗಿವೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಅದಕ್ಕಾಗಿ ನಾವು ಭಗವಂತನಿಗೆ ಎಂದಿಗೂ ಕೃತಜ್ಞರಾಗಿರಬೇಕು. ನಾವು ಸ್ವಾರ್ಥವನ್ನು ತೊರೆದು ನಿಸ್ವಾರ್ಥತೆಯಿಂದ ಬದುಕಿದಾಗ ಮಾತ್ರ ನಮ್ಮ ಬಾಳು ಬಂಗಾರವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಒಂದೊಂದು ಆಚರಣೆಗೂ ಒಂದೊಂದು ಅರ್ಥವಿದೆ ಮತ್ತು ಬಹುತೇಕ ಅದು ವೈಜ್ಞಾನಿಕ ತಳಹದಿಯ ಮೇಲೆ ಅವಲಂಬಿತವಾಗಿದೆ. ನೀವು ಮಾಡುವ ದಾನ-ಧರ್ಮಗಳು ಎಂದಿಗೂ ಸ್ಥಿರವಾಗಿರುತ್ತವೆ ಮತ್ತು ನಿಮ್ಮ ಕೀರ್ತಿಯನ್ನು ಆಚಂದ್ರಾರ್ಕವಾಗಿ ಇರಿಸುತ್ತವೆ ಎಂದು ಶ್ರೀಗಳು ತಿಳಿಸಿದರು.

ವೇದಿಕೆಯ ಮೇಲೆ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ ಇದ್ದರು. ಗವಾಯಿ ಹನುಮಂತಕುಮಾರ ಮೇಟಿ ಸಂಗೀತ ಸೇವೆ ನೀಡಿದರು. ಶಾಂತಕುಮಾರ ಹಿರೇಮಠ ತಬಲಾ ಸಾಥ್ ನೀಡಿದರು. ಶಿಕ್ಷಕ ಎಂ.ಕೆ. ಬೇವಿನಕಟ್ಟಿ ನಿರೂಪಿಸಿದರು.

ಶ್ರೀ ವೀರಪ್ಪಜ್ಜನವರ ಜೀವನ ದರ್ಶನದ ಪ್ರವಚನ ನುಡಿ ನುಡಿದ ಡಾ. ವಿಶ್ವನಾಥ ಮಹಾಸ್ವಾಮಿಗಳವರು, ಬಾಲ್ಯದ ದಿನಗಳಲ್ಲಿ ಶ್ರೀ ವೀರಪ್ಪಜ್ಜವನರ ಕಾರ್ಯ ಚಟುವಟಿಕೆಗಳು ಹೇಗಿದ್ದವು, ಅವನು ಯಾರಿಂದ ಪ್ರಭಾವಿತನಾಗಿ ವೈರಾಗ್ಯ ತಾಳಿದ, ನಂತರ ಅವನ ನಡೆ-ನುಡಿಗಳಲ್ಲಿ ಹೇಗೆ ಬದಲಾವಣೆಗಳಾದವು ಎಂಬುದನ್ನು ಸಾದೋಹರಣವಾಗಿ ವಿವರಿಸಿದರು.


Spread the love

LEAVE A REPLY

Please enter your comment!
Please enter your name here