HomeGadag Newsವ್ಯಸನ ಬಿಟ್ಟು ಸಶಕ್ತ ಸಮಾಜ ನಿರ್ಮಿಸಿ : ಹುಸೇನಸಾಬ ವಣಗೇರಿ

ವ್ಯಸನ ಬಿಟ್ಟು ಸಶಕ್ತ ಸಮಾಜ ನಿರ್ಮಿಸಿ : ಹುಸೇನಸಾಬ ವಣಗೇರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಾದಕ ವಸ್ತುಗಳ ವ್ಯಸನವೆಂಬುದು ಸಮಾಜಕ್ಕೆ ಅಂಟಿದ ರೋಗವಾಗಿದೆ. ಆ ರೋಗಕ್ಕೆ ಯುವ ಸಮೂಹವೇ ಬಲಿಯಾಗುತ್ತಿದೆ ಎನ್ನುವುದು ಖೇದಕರ ಸಂಗತಿ ಎಂದು ಸಮಾಜಕಾರ್ಯ ಸಂಶೋಧನಾ ವಿದ್ಯಾರ್ಥಿ ಹುಸೇನಸಾಬ ವಣಗೇರಿ ಅಭಿಪ್ರಾಯಪಟ್ಟರು.

ಅವರು ನವಜ್ಯೋತಿ ಸೇವಾ ಸಂಸ್ಥೆಯ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ತಂಬಾಕು, ಮದ್ಯ ಸೇರಿದಂತೆ ಹಲವಾರು ವ್ಯಸನಕ್ಕೆ ತುತ್ತಾಗುವ ಪದಾರ್ಥಗಳನ್ನು ಸೇವಿಸುವುದು ಅತೀ ದೊಡ್ಡ ಕಂಟಕವಾಗಿದೆ. ಅದರಿಂದ ಹೊರಬಂದು ನೆಮ್ಮದಿಯ ಬದುಕು ಸಾಗಿಸುವುದು ಪ್ರಸ್ತುತ ಅವಶ್ಯಕವಾಗಿದೆ. ಅದಕ್ಕಾಗಿ ಎಲ್ಲರೂ ವ್ಯಸನಮುಕ್ತರಾಗಿ ಸಶಕ್ತ ಸಮಾಜವನ್ನು ನಿರ್ಮಿಸಬೇಕು ಎಂದರು.

ಉದ್ಘಾಟಕರಾದ ಪ್ರಕಾಶ ಗಾಣಿಗೇರ ಮಾತನಾಡಿ, ವ್ಯಸನಕ್ಕೆ ನಮ್ಮ ದುರ್ಬಲ ಮನಸ್ಸೇ ಕಾರಣ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಸರಿಯಾದ ಮಾರ್ಗದಲ್ಲಿ ನಡೆದಿದ್ದೇ ಆದರೆ ವ್ಯಸನದಿಂದ ಮುಕ್ತರಾಗಬಹುದು ಎಂದರು.

ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ಸಂದೇಶ ಪಾಟೀಲ್ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರು ಬಹಳಷ್ಟು ಸಾರಿ ವ್ಯಸನಕ್ಕೆ ತುತ್ತಾಗಿ ಆರ್ಥಿಕವಾಗಿ ಹಿನ್ನೆಡೆ ಅನುಭವಿಸುತ್ತಾರೆ. ಅಂತಹವರಿಗಾಗಿ ಸರ್ಕಾರ ಬಹಳಷ್ಟು ಯೋಜನೆ ರೂಪಿಸಿದ್ದು, ಅವುಗಳ ಉಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ ವ್ಯಸನಮುಕ್ತ ಜೀವನ ನಡೆಸಬೇಕು ಎಂದರು.

ಕಾರ್ಮಿಕ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಬಿ.ಆರ್. ಜಾಧವ, ನವಜ್ಯೋತಿ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿಗಳು ಇದ್ದರು. ಹನಮಂತಗೌಡ ಪಾಟೀಲ ಸ್ವಾಗತಿಸಿದರು. ಈಶ್ವರ ಹಟ್ಟಿ ನಿರೂಪಿಸಿದರು. ಬಸವರಾಜ ಕರಲಿಂಗಣ್ಣವರ ವಂದಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!