ವಿಜಯಸಾಕ್ಷಿ ಸುದ್ದಿ, ಧಾರವಾಡ : ಸುಳ್ಳು ಆಮಿಷವೊಡ್ಡಿ ಅಧಿಕಾರಕ್ಕೆ ಬಂದು ಮೆರೆಯುತ್ತಿದ್ದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಕಾಂಗ್ರೆಸ್‌ನ ಭ್ರಷ್ಟಾಚಾರದ ಬೇಗೆಯಲ್ಲಿ ಬೇಸತ್ತು ಹೋಗಿರುವ ಜನ `ಕೈ’ ತೊರೆದು ಕಮಲ ಅರಳಿಸಲು ಮುಂದಾಗಿದ್ದಾರೆ. ವಾಲ್ಮೀಕಿ, ಮುಡಾ, ಕೆಐಎಡಿಬಿ, ಅಬಕಾರಿ ಹಗರಣಗಳ ಜೊತೆಗೆ ಪ್ರಾಮಾಣಿಕ ಅಧಿಕಾರಿಗಳ ಜೀವವನ್ನೇ ಭ್ರಷ್ಟ ಸರ್ಕಾರ ಬಲಿ ತೆಗೆದುಕೊಂಡಿದೆ. ಕೇವಲ ತನ್ನ ಓಲೈಕೆ ರಾಜಕಾರಣಕ್ಕಾಗಿ ಅನ್ನದಾತರ, ಮಠ-ಮಾನ್ಯಗಳ, ಸರ್ಕಾರಿ ಶಾಲೆಗಳ ಭೂಮಿಯನ್ನೇ ವಕ್ಫ್ ಬೋರ್ಡಿಗೆ ಕೊಡಲು ಮುಂದಾಗಿರುವ ಸರ್ಕಾರ, ನಾಳೆ ಇಡೀ ಕರ್ನಾಟಕವನ್ನೇ ವಕ್ಫ್ ಆಸ್ತಿಯೆಂದು ಘೋಷಣೆ ಮಾಡಲು ಕೂಡ ಹಿಂದೇಟು ಹಾಕದು ಎಂದಿದ್ದಾರೆ.
ಉಪಚುನಾವಣೆ ನಡೆಯುತ್ತಿರುವ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರದ ಜನತೆ ಮೂರೂ ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ತಾವು ಸಂಡೂರು ಹಾಗೂ ಶಿಗ್ಗಾಂವ್ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದು, ಈ ಬಾರಿ ಬಿಜೆಪಿ ಗೆಲುವಿನ ಕಹಳೆ ಮೊಳಗುವುದು ಖಚಿತ ಎಂದಿದ್ದಾರೆ.