ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಗೊಂದಲದ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿಚಾರ- ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರ ಕುರಿತು ರಾಜ್ಯ, ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ.
ಅಪಪ್ರಚಾರದಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಭಕ್ತಾದಿಗಳಿಗೆ ಆದ ಮಾನಸಿಕ ಕಿರುಕುಳದ ಚರ್ಚೆಯೂ ಆಗಿದೆ ಎಂದರು. ಅರ್ಬನ್ ನಕ್ಸಲರ ಕೋರಿಕೆ ಮೇರೆಗೆ ಮುಖ್ಯಮಂತ್ರಿ ರಾತ್ರೋರಾತ್ರಿ ಎಸ್.ಐ.ಟಿ. ರಚಿಸಿದ್ದರು. ನಾವು ಕೂಡ ಧರ್ಮಸ್ಥಳ ಚಲೋ ಮೂಲಕ ಜಾಗೃತಿ, ಸರಕಾರದ ಬೇಜವಾಬ್ದಾರಿತನದ ರಾಜ್ಯದ ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಹಾದಿಬೀದಿಯಲ್ಲಿ ಹೋಗುವವರ ಮಾತು ಕೇಳಿ ಮುಖ್ಯಮಂತ್ರಿಗಳು ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ತೀರ್ಮಾನ ಮಾಡಿದ್ದಾರಲ್ಲವೇ? ಅಪಪ್ರಚಾರಕ್ಕೆ ಬೆಲೆ ಕಟ್ಟುವವರು ಯಾರು? ಹಿಂದೂ ಭಾವನೆಗೆ ಧಕ್ಕೆ ತಂದ ಮುಖ್ಯಮಂತ್ರಿಗಳು ಇವತ್ತಿಗೂ ಕ್ಷಮೆ ಯಾಚಿಸಿಲ್ಲ. ಬದಲಾಗಿ ತಾವು ಮಾಡಿದ್ದೇ ಸರಿ ಎಂದು ಕೈತೊಳೆದುಕೊಂಡಿದ್ದಾರೆ. ಇದರಡಿ ಬುರುಡೆ ಗ್ಯಾಂಗ್ ನೆಪ ಮಾತ್ರ. ಷಡ್ಯಂತ್ರದ ಹಿಂದಿನ ದುಷ್ಟ ಶಕ್ತಿಗಳು ಯಾರೆಂದು ಬಯಲಾಗಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ಸಿನವರು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಸದನ ನಡೆಯುವಾಗ ದ್ವೇಷ ಭಾಷಣ ಸಂಬಂಧಿ ಮಸೂದೆ ತಂದು ಚರ್ಚೆಗೂ ಅವಕಾಶ ಕೊಡದೆ ಮಂಜೂರು ಮಾಡಿದ್ದಾರೆ. ಇದೊಂದು ದುಸ್ಸಾಹಸ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ತನ್ನ ವೈಫಲ್ಯ ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಬಿಜೆಪಿ, ಜೆಡಿಎಸ್, ಖಾಸಗಿ ವ್ಯಕ್ತಿಗಳು, ಮಾಧ್ಯಮದವರು ಟೀಕಿಸದಂತೆ ಮಸೂದೆ ತಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದರೆ ಒದ್ದು 9-10 ವರ್ಷ ಒಳಗೆ ಹಾಕುವ ಷಡ್ಯಂತ್ರವನ್ನು ಸರಕಾರ ಮಾಡಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಕೆಲಸ ಮಾಡಿದ್ದರು. ಆ ಕರಾಳ ದಿನ ಮರುಕಳಿಸುವ ಕಾಯ್ದೆಯನ್ನು ಸರಕಾರ ತಂದಿದೆ ಎಂದರು. ಇದು ಅಸಹಿಷ್ಣುತೆಯ ಪ್ರತೀಕ. ಪ್ರಜಾಪ್ರಭುತ್ವದ ಕಗ್ಗೊಲೆ ಇದು ಎಂದು ಟೀಕಿಸಿದರು.



