ಮಾನವ ಕಳ್ಳ ಸಾಗಾಣಿಕೆ ತಡೆಯುವದು ಎಲ್ಲರ ಜವಾಬ್ದಾರಿ

0
Anti-Human Trafficking Day Program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ತಡೆಗಟ್ಟುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ `ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆಗೆ ಬಡತನ, ಹೆಚ್ಚುತ್ತಿರುವ ವಲಸೆ, ಕುಟುಂಬದ ಸಮಸ್ಯೆ ಮೂಲ ಕಾರಣಗಳಾಗಿವೆ. ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ ಅವರು ಮಹಿಳೆ ಮತ್ತು ಮಕ್ಕಳು ಸುಶಿಕ್ಷಿತರಾದರೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ್ದರು. ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವುದು ವಿವಿಧ ಇಲಾಖೆಗಳ ಕರ್ತವ್ಯವಲ್ಲದೇ ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯೂ ಆಗಿದೆ. ಲೈಂಗಿಕ ಶೋಷಣೆ, ಮಕ್ಕಳ ಭಿಕ್ಷಾಟನೆ, ಜೀತಕ್ಕಾಗಿ, ಬಾಲಕಾರ್ಮಿಕತೆ, ಅಂಗಾಂಗ ಕಸಿಗಾಗಿ, ಬಾಲ್ಯ ವಿವಾಹ ಮುಂತಾದ ಕಾರಣಗಳಿಗಾಗಿ ಮಾನವ ಕಳ್ಳ ಸಾಗಾಣಿಕೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, ಮಹಿಳೆ ಮತ್ತು ಮಕ್ಕಳನ್ನು ಕಳ್ಳತನ ಮಾಡಿ ಹೊರದೇಶಕ್ಕೆ ಕರೆದುಕೊಂಡು ಹೋಗುವುದು, ಅನೈತಿಕ ಕಾರ್ಯಗಳಿಗೆ ಬಳಸುವುದು, ಅಪಾಯಕಾರಿ ಕಾರ್ಖಾನೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ತೊಡಗಿಸುವುದು, ಬಂದ ಹಣವನ್ನು ವಸೂಲು ಮಾಡುವುದು ಇವೆಲ್ಲ ಮಾನವ ಕಳ್ಳ ಸಾಗಾಣಿಕೆಯ ಮುಖ್ಯ ಉದ್ದೇಶವಾಗಿದೆ. ಇದನ್ನು ತಡೆಗಟ್ಟಲು ಎಲ್ಲ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದರ ತಡೆಗಾಗಿ ಎಲ್ಲರೂ ಜಾಗೃರಾಗಬೇಕು ಎಂದು ತಿಳಿಸಿದರು.

Anti-Human Trafficking Day Program

ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಮಕ್ಕಳ ರಕ್ಷಣಾ ಘಟಕದ ಮಲ್ಲಪ್ಪ ಹೊಸಳ್ಳಿ ಪ್ರತಿಜ್ಞಾ ವಿಧಿಸಿ ಬೋಧಿಸಿದರು. ಮಹಿಳಾ ಅಭಿವೃದ್ಧಿ ಅಧಿಕಾರಿ ಕಮಲಾ ಬೇಟಿ ಬಚಾವೋ ಬೇಟಿ ಪಡಾವೋ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮಕ್ಕಳ ರಕ್ಷಣಾ ಘಟಕದ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಅಸೂಟಿ ಮಾತನಾಡಿ, ಮಾನವ ಕಳ್ಳಸಾಗಣೆಯು ಹಿಂದಿನ ಕಾಲದಿಂದಲೂ ಇದೆ. ಇದೊಂದು ಸಂಘಟಿತವಾಗಿ ಮಾಡುವ ಅಪರಾಧವಾಗಿದ್ದು, ಮಾರುಕಟ್ಟೆಯಲ್ಲಿ ಜಾನುವಾರು ಮಾರಾಟದಂತೆ ಮನುಷ್ಯರನ್ನು ಬಹಿರಂಗವಾಗಿ ಮಾರಲಾಗುತ್ತದೆ. ಆಧುನಿಕ ಕಾಲದಲ್ಲಿ ಮಾನವ ಕಳ್ಳ ಸಾಗಣೆ ಮಾಡಿ ಅಪಾಯಕಾರಿ ಕ್ಷೇತ್ರಗಳಲ್ಲಿ ಬಳಕೆ ಮಾಡುತ್ತಾರೆ. ಕಾನೂನು ಬಾಹಿರವಾಗಿ ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಿ ಲೈಂಗಿಕವಾಗಿ ಅಶ್ಲೀಲವಾಗಿ ಬಳಸಿಕೊಳ್ಳುತ್ತಾರೆ. ಮಾನವ ಕಳ್ಳಸಾಗಣೆಗೆ ಹೆಚ್ಚಾಗಿ ಹದಿಹರೆಯದವರು, ವಿಧವೆಯರು, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ, ಅನಕ್ಷರಸ್ಥರು, ನಿರುದ್ಯೋಗಿಗಳು, ಸೇರಿದಂತೆ ಇಂದಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರನ್ನು ನಂಬಿ ಬಲಿಪಶುಗಳಾಗುತ್ತಾರೆ ಎಂದರು.

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯು ಒಂದು ಸಾಮಾಜಿಕ ಪಿಡುಗಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರನ್ನು ಕೂಡ ಗೌರವದಿಂದ ಕಾಣಬೇಕು ಎಂದು ಜಾಗೃತಿ ಮೂಡಿಸಲು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ತಮ್ಮನ್ನು ತಾವು ತೊಡಗಿಸಿಕೊಂಡರು. ಮಾನವರನ್ನು ಗೌರವದಿಂದ ಕಾಣುವುದು ಹಾಗೂ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವುದು ಮಾನವ ಹಕ್ಕುಗಳ ಕಾಯ್ದೆಯ ಮೂಲ ಸ್ವರೂಪವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಉಪವಿಭಾಗಾಧಿಕಾರಿ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿ ಪಾಟೀಲ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಕುರ್ತಕೋಟಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ಇತರರು ಇದ್ದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸ್ವಾಗತಿಸಿದರು. ಮಲ್ಲಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಫೀಕಾ ಹಳ್ಳೂರ ವಂದಿಸಿದರು.

ಮಾನವ ಕಳ್ಳಸಾಗಣೆ ತಡೆಗಟ್ಟಲು ಸಮಾಜದ ಸ್ವಸಹಾಯ ಗುಂಪಿನವರು, ಕುಟುಂಬಸ್ಥರು ಸೇರಿದಂತೆ ಪ್ರತಿಯೊಬ್ಬರೂ ಶ್ರಮವಹಿಸಬೇಕು. ಮಕ್ಕಳು ಯಾವುದೇ ರೀತಿಯ ತೊಂದರೆಗೊಳಗಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಾನವ ಹಕ್ಕುಗಳ ಅಯೋಗ ಸಹಾಯವಾಣಿ-18004252333, ಮಹಿಳಾ ಸಹಾಯವಾಣಿ 181, ಕಾರ್ಮಿಕ ಸಹಾಯವಾಣಿ 155214, ತುರ್ತು ಸ್ಪಂದನ ಸಹಾಯವಾಣಿ-112 ಸಂಪರ್ಕಿಸಬಹುದಾಗಿದೆ ಎಂದು ಮಂಜುನಾಥ ಅಸೂಟಿ ಹೇಳಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಹೆಣ್ಣುಮಕ್ಕಳಿಗೆ ಮೋಸ ಮಾಡಿ ಪಾಲಕರಿಂದ ಬೇರ್ಪಡಿಸಿ ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳುವುದು ಹಾಗೂ ಮಕ್ಕಳನ್ನು ಅಪಹರಿಸಿ ಬಿಕ್ಷಾಟನೆಗೆ ಕಳುಹಿಸುವುದು ಇವೆಲ್ಲ ಮಾನವ ಕಳ್ಳ ಸಾಗಾಣಿಕೆಗಳಾಗಿವೆ. ಪ್ರಸ್ತುತ ಕಾಲದಲ್ಲಿ ಬಡತನವಷ್ಟೇ ಅಲ್ಲದೆ, ಜಾಗೃತಿಯ ಕೊರತೆ ಮುಖ್ಯವಾಗಿದೆ. ಕಾರಣ, ಕಾಲೇಜು ಯುವತಿಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ ಯಾರಿಂದಲೂ ಪ್ರಲೋಭನೆಗೆ ಒಳಗಾಗಬಾರದು, ಮೊಬೈಲ್‌ನ ಮುಖಾಂತರ ಆಕರ್ಷಣೆಗೆ ಮತ್ತು ಆಮಿಷಗಳಿಗೆ ಒಳಗಾಗಿ ಮೋಸಹೋಗಬಾರದು ಎಂದರು.


Spread the love

LEAVE A REPLY

Please enter your comment!
Please enter your name here