ಬೆಂಗಳೂರು: ಶಾಸಕ ಜನಾರ್ದನ ರೆಡ್ಡಿ ತಮ್ಮನ್ನು ಏಕವಚನದಲ್ಲಿ ಸಂಬೋಧಿಸಿರುವುದು ಹಾಗೂ ತಾವು ಅವರಿಂದ ಸಹಾಯ ಪಡೆದಿದ್ದೇನೆ ಎಂಬ ಹೇಳಿಕೆಗೆ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ತಮ್ಮ ಅಧಿಕೃತ ಎಕ್ಸ್ ಖಾತೆ ಮೂಲಕ ಈಗಾಗಲೇ ಉತ್ತರ ನೀಡಿದ್ದೇನೆ ಎಂದು ಹೇಳಿರುವ ತಂಗಡಗಿ, ‘ನಾನು ಯಾರ ತಂಟೆಗೂ ಹೋಗುವುದಿಲ್ಲ, ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ 79ನೇ ವರ್ಷದ ಉತ್ಸವದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಗಡಗಿ, ಜನಾರ್ದನ ರೆಡ್ಡಿ ಅವರೊಂದಿಗಿನ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿದರು.
ಜನಾರ್ದನ ರೆಡ್ಡಿ ತಮ್ಮನ್ನು ‘ಲೇ’ ಎಂದು ಸಂಬೋಧಿಸಿದ್ದಾರೆ. ತಾವು ರೆಡ್ಡಿ ಅವರಿಗೆ ಅದೇ ರೀತಿಯ ಪದ ಬಳಸಿಲ್ಲ. ಬದಲಾಗಿ ತಮ್ಮ ಅಧಿಕೃತ ಎಕ್ಸ್ ಖಾತೆ ಮೂಲಕ ‘ಅಣ್ತಮ್ಮಾ’ ಎಂದೇ ಪ್ರತಿಕ್ರಿಯಿಸಿದ್ದೇನೆ ಎಂದು ತಂಗಡಗಿ ಹೇಳಿದ್ದಾರೆ.
ರೆಡ್ಡಿ ಅವರು ಎರಡು ದಿನಗಳ ಬಳಿಕ ತಾವು ಈ ಹಿಂದೆ ಹೊಗಳಿದ್ದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ ಎಂದು ತಂಗಡಗಿ ಹೇಳಿದ್ದಾರೆ. ಇದೇ ವೇಳೆ, ಈ ಹಿಂದೆ ಆನೆಗೊಂದಿ ಉತ್ಸವದಲ್ಲಿ ಜನಾರ್ದನ ರೆಡ್ಡಿ ತಮ್ಮನ್ನು ಹೊಗಳಿರುವ ವಿಡಿಯೋವನ್ನೂ ಬಿಡುಗಡೆ ಮಾಡಲಿ ಎಂದು ಅವರು ಸವಾಲು ಹಾಕಿದ್ದಾರೆ.
ಜನಾರ್ದನ ರೆಡ್ಡಿ ಅವರು ತಮಗೆ ಮಾಡಿರುವ ಸಹಾಯದ ವಿಚಾರವನ್ನೂ ನೆನಪಿಸಿಕೊಳ್ಳಲಿ ಎಂದು ತಂಗಡಗಿ ಹೇಳಿದ್ದಾರೆ. ತಮ್ಮ ಜಮೀನು ಮಾರಾಟ ಮಾಡಿದ್ದು, ರೆಡ್ಡಿ ಅವರ ಆಪ್ತರೊಬ್ಬರು ಆ ಜಮೀನು ಪಡೆದು ಹಣ ನೀಡಿದ್ದರು ಎಂದು ತಂಗಡಗಿ ಹೇಳಿದ್ದಾರೆ.
ಈ ವಿಚಾರವನ್ನೇ ತಾವು ಹೇಳಿದ್ದಾಗಿ ಸ್ಪಷ್ಟಪಡಿಸಿರುವ ಅವರು, ಆದರೆ ಇದಕ್ಕೆ ಪ್ರತಿಯಾಗಿ ‘ಕನಕಗಿರಿ ಕ್ಷೇತ್ರದ ಜನರನ್ನು ನಾನೇ ಸಾಕಿದ್ದೇನೆ, ತಂಗಡಿಗೆ ನಾನೇ ಸಲಹಿದ್ದೇನೆ’ ಎಂಬ ರೀತಿಯಲ್ಲಿ ಹೇಳಿಕೆ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



