ಬೆಂಗಳೂರು: “ಇದನ್ನ ನಾನು ಡಿಸೈಡ್ ಮಾಡೋದಲ್ಲ, ಹೈಕಮಾಂಡ್ ತೀರ್ಮಾನ ಮಾಡಲಿದೆ. ಯಾರಾದರೂ ಓಕೆ… ರಾಜ್ಯಕ್ಕೆ ಒಳ್ಳೇದಾಗಬೇಕು” ಎಂದು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸ್ಪಷ್ಟವಾಗಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗೆ ಕುರ್ಚಿ ಕಿತ್ತಾಟ, ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ ಅವರು ಮಾಧ್ಯಮಗಳ ಮುಂದೆ ತಮ್ಮ ನಿಲುವು ಪ್ರಕಟಿಸಿದರು.
ಸೀನಿಯರ್ ನಾಯಕರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ all are there to decide ಎಂದು ಹೇಳಿದ ರಮ್ಯಾ, ಪಕ್ಷದೊಳಗಿನ ಗೊಂದಲವೇ ರಾಜಕೀಯದ ಸ್ವಭಾವ ಎಂದು ನಕ್ಕರು. ಎಲ್ಲಾ ನಾಯಕರಿಗೂ ಅರ್ಹತೆ ಇದೆ, ಯಾರೇ ಆಗಲಿ ನನಗೆ ಒಪ್ಪೇ, ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲೇ ಎಂದರು.
ಇದೇ ವೇಳೆ ನಟಿ ನಿಶ್ವಿಕಾ ನಾಯ್ಡು ಅವರ ಹೇಳಿಕೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ರಮ್ಯಾ, “ನಿಶ್ವಿಕಾ ಹೇಳಿದ್ದು ಸರಿಯೇ. ಗಂಡಸರಿಗೆ ಇರುವಷ್ಟೇ ಹಕ್ಕು ಹೆಂಗಳುಗಳಿಗೆ ಇದೆ. ನೀವು ಬಟ್ಟೆ ಹಾಕಿಕೊಳ್ಳುವುದು ನಿಮ್ಮ ಸ್ವಾತಂತ್ರ್ಯ; ನಮಗೆ ಇರಬಾರದೇ? ನಿಮಗೆ ಇಷ್ಟ ಇಲ್ಲ ಅಂದ್ರೆ ಕಾಮೆಂಟ್ ಮಾಡೋಕೆ ಹೋಗಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಬೇಕಾದರೂ, ಕೆಟ್ಟ ಕಾಮೆಂಟ್‌ಗೆ ಅವಕಾಶ ಕೊಡಬಾರದು” ಎಂದು ಹೇಳಿದರು.
ಚಿತ್ರರಂಗಕ್ಕೆ ಕಮ್ ಬ್ಯಾಕ್ ಕುರಿತು ಮಾತನಾಡಿದ ರಮ್ಯಾ, ಈಗಾಗಲೇ 40-50 ಸ್ಕ್ರಿಪ್ಟ್ ಕೇಳಿದ್ದು, ಒಂದನ್ನು ತುಂಬಾ ಇಷ್ಟಪಟ್ಟಿದ್ದೇನೆ ಎಂದರು. ಯಾವ ತಂಡದ ಜೊತೆ ಸಿನಿಮಾ ಮಾಡ್ತಿದ್ದೇನೆ ಅನ್ನೋದನ್ನು ಈಗ ಹೇಳಲ್ಲ, ಆದರೆ ಸ್ಕ್ರಿಪ್ಟ್ ಬರೆಯುತ್ತಿರುವ ನಿರ್ದೇಶಕರು ಈಗಾಗಲೇ ಹಿಟ್ ಸಿನಿಮಾ ನೀಡಿದ್ದಾರೆ. ಅವರ ಕೆಲಸ ನನಗೆ ತುಂಬಾ ಇಷ್ಟ ಎಂದು ಹೇಳಿದರು. ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾಗೆ ಶುಭ ಹಾರೈಸಿದ ರಮ್ಯಾ, ಮುಂದಿನ ದಿನಗಳಲ್ಲಿ ಸಿನಿಮಾ ಕ್ಷೇತ್ರದಲ್ಲೂ ಹೊಸ ಆರಂಭದ ಸುಳಿವು ನೀಡಿದರು.



