ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಹೆಚ್ಚು ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಆ ಸಾಲಿಗೆ “ಅಪಾಯವಿದೆ ಎಚ್ಚರಿಕೆ” ಚಿತ್ರ ಸಹ ಸೇರುವ ಎಲ್ಲಾ ಲಕ್ಷಣಗಳಿದೆ. ತೀರ್ಥಹಳ್ಳಿ ಮೂಲದವರಾದ ಅಭಿಜಿತ್ ತೀರ್ಥಹಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದು,
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಅಣ್ಣಯ್ಯ” ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ. ವಿ.ಜಿ.ಮಂಜುನಾಥ್ ಹಾಗು ಪೂರ್ಣಿಮಾ ಎಂ ಗೌಡ ಈ ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಯಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನನಗೂ ಚಿತ್ರರಂಗಕ್ಕೂ ಹತ್ತು ವರ್ಷಗಳ ನಂಟು. ಕೆಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿದ್ದ ನಾನು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಪಂಚಭೂತಗಳ ಆಧಾರದ ಮೇಲೆ ಈ ಚಿತ್ರದ ಕಥೆ ಹೆಣೆಯಲಾಗಿದೆ. ಒಂದು ಪಾತ್ರಗಳು ಒಂದೊಂದು ತತ್ವವನ್ನು ಪ್ರತಿನಿಧಿಸುತ್ತದೆ. ವಿಕಾಶ್ ಉತ್ತಯ್ಯ ಸೂರಿ ಪಾತ್ರದಲ್ಲಿ, ರಾಘವ್ ಕೊಡಚಾದ್ರಿ ಹಾಗೂ ಮಿಥುನ್ ತೀರ್ಥಹಳ್ಳಿ ವಿಕಾಶ್ ಅವರ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ಭಗವತಿ ರಾಧಾ ಎಂಬ ಹೆಸರಿನಲ್ಲೆ ಬ್ರಾಹ್ಮಣ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಸ್ಪೆನ್ ಅಡ್ವೆಂಚರ್ ಹಾರಾರ್ ಜಾನಾರ್ ನ ಈ ಚಿತ್ರಕ್ಕೆ ಸುನಾದ್ ಗೌತಮ್ ಛಾಯಾಗ್ರಹಣದೊಂದಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಮೂರು ಹಾಡುಗಳಿದ್ದು, ಆನಂದ್ ಆಡಿಯೋದವರು ಆಡಿಯೋ ಹಕ್ಕು ಪಡೆದುಕೊಂಡಿದ್ದಾರೆ. ಚಿತ್ರಕ್ಕೆ ಹರ್ಷಿತ್ ಪ್ರಭು ಸಂಕಲನವಿದೆ. ಈ ಚಿತ್ರವನ್ನು ನಿರ್ದೇಶಿಸಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನನ್ನ ತಂಡಕ್ಕೆ ಧನ್ಯವಾದ ಎಂದು ತಿಳಿಸಿದ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಚಿತ್ರವನ್ನು ಜನವರಿಯಲ್ಲಿ ತೆರೆಗೆ ತರುವುದಾಗಿ ಹೇಳಿದರು.
ಸಿನಿಮಾ ಅನ್ನುವುದು ಕೃತಿ, ಹಾಗೆ ಕೃಷಿ. ಅದನ್ನು ರಚಿಸಿ, ರುಚಿಸಿ ನಿರ್ದೇಶಿಸುವುದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಅವರ ಬಹು ದಿನಗಳ ಕನಸು. ಆ ಕನಸು ಇಂದು ನನಸ್ಸಾಗಿದೆ. ಅವರು ಈ ಚಿತ್ರಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ನಮ್ಮನೆಲ್ಲಾ ಅವರು ಆಡಿಷನ್ ಮಾಡಿದ ರೀತಿಯೇ ವಿಭಿನ್ನ. ಸೂರಿ ನನ್ನ ಪಾತ್ರದ ಹೆಸರು ಎಂದರು ನಾಯಕ ವಿಕಾಶ್ ಉತ್ತಯ್ಯ.
“ಕದ್ದು ಮಚ್ಚಿ” ನಂತರ ನಾನು ನಿರ್ಮಾಣ ಮಾಡಿರುವ ಚಿತ್ರವಿದು. ಸಹೋದರಿ ಪೂರ್ಣಿಮಾ ಕೂಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ನಿರ್ದೇಶಕ ಅಭಿಜಿತ್ ಅವರ ಶ್ರಮ ಈ ಚಿತ್ರಕ್ಕೆ ಸಾಕಷ್ಟಿದೆ ಎಂದು ನಿರ್ಮಾಪಕ ಮಂಜುನಾಥ್ ತಿಳಿಸಿದರು.
ನಟರಾದ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ನಟಿ ರಾಧಾ ಭಗವತಿ, ಸಂಗೀತ ನಿರ್ದೇಶಕ ಹಾಗು ಛಾಯಾಗ್ರಾಹಕ ಸುನಾದ್ ಗೌತಮ್ ಹಾಗೂ ಸಂಕಲನಕಾರ ಹರ್ಷಿತ್ ಪ್ರಭು “ಅಪಾಯವಿದೆ ಎಚ್ಚರಿಕೆ” ಕುರಿತು ಮಾಹಿತಿ ನೀಡಿದರು.