ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿ ಪಟ್ಟಣದಲ್ಲಿಯ ಎಪಿಎಂಸಿ ಉಪ ಮಾರುಕಟ್ಟೆಯ ಹೊಸ ಮತ್ತು ಹಳೆಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಶಿರಹಟ್ಟಿ ಪಟ್ಟಣದಲ್ಲಿಯೇ ನಡೆಸಬೇಕೆಂದು ಶಿರಹಟ್ಟಿಯಲ್ಲಿ ಬುಧವಾರ ತಹಸೀಲ್ದಾರ ಅನಿಲ ಬಡಿಗೇರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಗುರುವಾರ ಶಿರಹಟ್ಟಿ ಪಟ್ಟಣಕ್ಕೆ ಎಪಿಎಂಸಿ ಕಾರ್ಯದರ್ಶಿಗಳು ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ, ಜು.10ರ ಮಧ್ಯಾಹ್ನ 2.30ಕ್ಕೆ ಶಿರಹಟ್ಟಿಯಲ್ಲಿಯೇ ಬಹಿರಂಗ ಹರಾಜು ಪ್ರಕ್ರಿಯೆ ನಡೆಸುವುದಾಗಿ ಮುಖಂಡರಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಅಕ್ಬರಸಾಬ ಯಾದಗಿರಿ, ಶಿರಹಟ್ಟಿ ಪಟ್ಟಣದಲ್ಲಿಯೇ ಎಪಿಎಂಸಿ ಉಪ ಮಾರುಕಟ್ಟೆಯ ಎಲ್ಲ ಮಳಿಗೆಗಳ ಟೆಂಡರ್ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಲಾಗಿತ್ತು. ಇದೀಗ ಜು.10ಕ್ಕೆ ನಡೆಸಲು ಭರವಸೆ ನೀಡಿದ್ದಾರೆ. ಪಟ್ಟಣದ ಜನತೆಯ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ ಎಂದರು.
ಜಿಲ್ಲಾ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಪ.ಪಂ ಮಾಜಿ ಉಪಾಧ್ಯಕ್ಷ ಚಾಂದಸಾಬ ಮುಳಗುಂದ, ರಾಮಣ್ಣ ಕಂಬಳಿ, ಅಲ್ಲಾಭಕ್ಷಿ ನಗಾರಿ, ಸೋಮನಗೌಡ ಮರಿಗೌಡ, ಬಸವರಾಜ ವಡವಿ ಮುಂತಾದವರು ಉಪಸ್ಥಿತರಿದ್ದರು.