ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸೋಮವಾರ ಶಿರಹಟ್ಟಿ ತಾಲ್ಲೂಕಾ ಕುರುಬರ ಸಂಘದ ವತಿಯಿಂದ ಎಸ್‌ಟಿ ಮೀಸಲಾತಿ ಹಾಗೂ ಕುರುಬರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಕುರಿ, ಸ್ವಾತಂತ್ರ್ಯ ಪೂರ್ವದಿಂದಲೂ ಕುರಿಗಳನ್ನು ಮೇಯಿಸುತ್ತಾ ಅಲೆಮಾರಿ ಜನಾಂಗದಂತೆ ಸುತ್ತಾಡುತ್ತಾ ಜೀವನ ಸಾಗಿಸುತ್ತಾ ಬಂದಿದ್ದು, ಮುಂದಿನ ಪೀಳಿಗೆಗೆ ವಿದ್ಯಾಭ್ಯಾಸದ ಹಾಗೂ ಸಮಾಜದ ಹಿತದೃಷ್ಟಿಯಿಂದ ಯಾವುದೇ ಒತ್ತಡಕ್ಕೆ ಮಣಿಯದೇ ನಮಗೆ ಎಸ್‌ಟಿ ಮೀಸಲಾತಿ ಕಡ್ಡಾಯವಾಗಿ ಕೊಡಬೇಕು. ಕುರುಬರಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು, ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸಲು ಅವಕಾಶ ಕಲ್ಪಿಸಬೇಕು. ಕುರಿಗಳ ಅಕಾಲಿಕ ಮರಣದಿಂದ ಸರಕಾರ ನೀಡುತ್ತಿರುವ ಧನ ಸಹಾಯವನ್ನು ಕುರಿಗಾಹಿಗಳಿಗೆ ನಿಗದಿತ ಸಮಯಕ್ಕೆ ನೀಡಬೇಕು, ಪ್ರತಿ ತಾಲೂಕಿಗೆ ಕನಕ ಭವನ ನಿರ್ಮಾಣ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದರು.
ರಾಮಣ್ಣ ಕಂಬಳಿ, ಚನ್ನವೀರಪ್ಪ ಸ್ವಾಮಿ, ದೇವಪ್ಪ ಬಜನಿ, ಹೊನ್ನಪ್ಪ ಗೂಳಪ್ಪನವರ, ಬಸಪ್ಪ ಬಸಾಪೂರ, ಸುರೇಶ ಕುರಿ, ಫಕ್ಕೀರೇಶ ಜಿಡಗಣ್ಣವರ, ಲಕ್ಷ್ಮಣ ರೊಟ್ಟಿಗವಾಡ, ಹನುಮಂಪ್ಪ ವಲೀಕಾರ, ಸುರೇಶ ವಾಲೀಕಾರ, ಬಸವರಾಜ ಕಂಬಳಿ, ಮಂಜು ಯರಿಮನಿ, ಫಕ್ಕೀರೇಶ ಡಂಬಳ ಮುಂತಾದವರು ಉಪಸ್ಥಿತರಿದ್ದರು.