ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಪಟ್ಟಣದ 18ನೇ ವಾರ್ಡ್ನ ನಿವಾಸಿಗಳು ಬುಧವಾರ ಪುರಸಭೆಗೆ ದೌಡಾಯಿಸಿ ಪುರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 20 ದಿನಗಳಿಂದಲೂ ನಮ್ಮ ಭಾಗಕ್ಕೆ ಕುಡಿಯುವ ನೀರು ಪೂರೈಕೆ ಮಾಡಿಲ್ಲ ಎಂದು ಮಹಿಳೆಯರು ಆರೋಪಿಸಿದರು. ಈ ವೇಳೆ ವಾರ್ಡ್ನ ನಿವಾಸಿ ನಿಂಗಪ್ಪ ಬಾಲೆಹೊಸೂರು, ಭರಮಪ್ಪ ಕಡ್ಡಿಪೂಜಾರ, ಯಲ್ಲಪ್ಪ ಕಡ್ಡಿಪೂಜಾರ ಮಾತನಾಡಿ, ಕುಡಿಯುವ ನೀರು ಬೇಕೆಂದರೆ ಕೀಲೋಮೀಟರ್‌ಗಟ್ಟಲೆ ಅಲೆದಾಡಿ ನೀರು ಹೊತ್ತುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಓಣಿಗೆ ಸರಿಯಾಗಿ ನೀರು ಬಿಡುತ್ತಿಲ್ಲ. ನೀರಿನ ತೆರಿಗೆ ಕಟ್ಟದಿದ್ದರೆ ಪುರಸಭೆಯವರು ಸಂಪರ್ಕ ಕಟ್ ಮಾಡುತ್ತಾರೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಸರಿಯಾಗಿ ನೀರು ಬಿಡದಿದ್ದರೆ ಖಾಲಿ ಕೊಡಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವಾರ್ಡ್ನ ಮಹಿಳೆಯರಾದ ಜಯವ್ವ ಬಾಲೇಹೊಸೂರು, ಹೊಳಲಮ್ಮ ಕಡ್ಡಿಪೂಜಾರ ಪುರಸಭೆ ವ್ಯವಸ್ಥೆ ಬಗ್ಗೆ ಮಾತನಾಡಿ, ಓಣಿಯಲ್ಲಿರುವ ಚರಂಡಿಗಳನ್ನು ವರ್ಷಕ್ಕೆ ಅಥವಾ ಆರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುತ್ತಾರೆ. ಇದೀಗ ಹಲವು ದಿನಗಳಿಂದ ಗಟಾರ ತುಂಬಿಕೊಂಡು ಓಣಿಯಲ್ಲಿ ಗಬ್ಬು ವಾಸನೆ ಹರಡಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಕಡ್ಡಿಪೂಜಾರ, ದುಂಡಪ್ಪ ಕಡ್ಡಿಪೂಜಾರ, ಹನಮಂತಪ್ಪ ಕಡ್ಡಿಪೂಜಾರ, ಲಕ್ಷ್ಮವ್ವ, ಕಮಲವ್ವ ಮುಂತಾದವರಿದ್ದರು.