ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸವಣೂರ ರಸ್ತೆಗೆ ಹೊಂದಿಕೊಂಡಿರುವ ಗುಲಗಂಜಿಕೊಪ್ಪದ ಮುಖ್ಯದ್ವಾರದಿಂದ ದುಂಡಿಬಸವೇಶ್ವರ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಕಾರಣದಿಂದಾಗಿ, ಈ ಪ್ರಮುಖ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ನಿರ್ಮಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಸದಸ್ಯರು ಗುರುವಾರ ತಹಸೀಲ್ದಾರರ ಮೂಲಕ ಗದಗ ಜಿಲ್ಲಾ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಮಾರ್ಗದಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜುಗಳಿಗೆ ಸಂಚರಿಸುತ್ತಿದ್ದು, ನೂರಾರು ಎಕರೆ ಭೂಮಿಯನ್ನು ಹೊಂದಿರುವ ರೈತರು ಸಹ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ರೈತರು ಬೆಳೆ ಕೈಗೆ ಬಂದ ನಂತರ ಅದನ್ನು ಸಾಗಿಸಲು ಪರದಾಡುವ ಪರಿಸ್ಥಿತಿ ಎದುರಾಗಿರುವುದರಿಂದ, ಕೂಡಲೇ ಸಿಸಿ ರಸ್ತೆ ನಿರ್ಮಿಸಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಮನವಿಯನ್ನು ಗ್ರೇಡ್–2 ತಹಸೀಲ್ದಾರ ಮಂಜುನಾಥ ಅಮಾಸಿ ಸ್ವೀಕರಿಸಿದರು. ಈ ವೇಳೆ ಸಮಿತಿಯ ಅಧ್ಯಕ್ಷ ಮಂಜುನಾಥ ಮಾದರ, ಉಪಾಧ್ಯಕ್ಷ ಮಾಂತೇಶ ಪೂಜಾರ, ಕಾರ್ಯದರ್ಶಿ ಕಾರ್ತಿಕ ದೊಡ್ಡಮನಿ, ಗೌರವಾಧ್ಯಕ್ಷ ರಮೇಶ ಹರಿಜನ, ಹಾಗೂ ಪರಮೇಶ ಮ್ಯಾಗೇರಿ, ಶಿವಾನಂದ ತಳಗೇರಿ, ಭರಮಪ್ಪ ಮಧ್ಯಮನಿ, ಅರುಣ ತಳಗೇರಿ, ಫಕೀರೇಶ ಹರಿಜನ, ತಿಪ್ಪಣ್ಣ ಹರಿಜನ, ಮಂಜುನಾಥ ಹರಿಜನ, ಗುರುನಾಥ ಕಲ್ಮಣಿ, ರವಿಕುಮಾರ ಹರಿಜನ, ವಿನೋದ ಪೂಜಾರ, ರಾಜು ಹಾದರಗೇರಿ ಮೊದಲಾದವರು ಹಾಜರಿದ್ದರು.



