ವಿಜಯಸಾಕ್ಷಿ ಸುದ್ದಿ, ಗದಗ : ದೇಶದ ಮೂಲೆ ಮೂಲೆಗಳಲ್ಲಿ ಮಠ-ಮಂದಿರಗಳ, ಬಡ ರೈತರ, ಸರಕಾರಿ ಸ್ವಾಮ್ಯದ ಜಾಗೆಗಳು ವಕ್ಫ್ ಆಸ್ತಿಯಾಗಿ ಪರಿವರ್ತನೆಯಾಗುತ್ತಿರುವುದನ್ನು ಖಂಡಿಸಿ ಗದಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ ವತಿಯಿಂದ ಕೇಂದ್ರ ಸರ್ಕಾರದಿಂದ ನಿಯೋಜಿಸಲ್ಪಟ್ಟ ಜೆಪಿಸಿ ಚೇರಮನ್ ಜಗದಂಬಿಕಾ ಪಾಲ್ ಇವರಿಗೆ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಲು ಒತ್ತಾಯಿಸಿ ಮನವಿ ನೀಡಲಾಯಿತು.
ಗದಗ ಜಿಲ್ಲೆಯ ಕೋಟುಮಚಗಿ ಗ್ರಾಮದ 2ನೇ ವಿಕ್ರಮಾದಿತ್ಯ ಕಟ್ಟಿಸಿದ, ಕವಿ ಚಾಮರಸರು ಪ್ರಭುಲಿಂಗ ಲೀಲೆ ಪುರಾಣವನ್ನು ಬರೆದ ಪುರಾತನ ಹಾಗೂ ಲಕ್ಷಾಂತರ ಭಕ್ತರನ್ನು ಹೊಂದಿರುವ ಶ್ರೀ ಸೋಮೇಶ್ವರ ದೇವಸ್ಥಾನವು, ತ್ರಿವಿಧ ದಾಸೋಹಿ ನರೇಗಲ್ ಶ್ರೀ ಅನ್ನದಾನೇಶ್ವರ ಮಠದ ಆಸ್ತಿ, ಲಕ್ಕುಂಡಿಯ ಮಠದ ಆಸ್ತಿ, ಹಿಂದೂಗಳ ರುದ್ರಭೂಮಿ ಹೀಗೆ ಜಿಲ್ಲೆಯ ಮಠ-ಮಂದಿರ ಹಾಗೂ ಬಡ ರೈತರ ಭೂಮಿಗಳು ವಕ್ಫ್ ಆಸ್ತಿಯಾಗಿ ಬದಲಾಗಿದೆ. ಈ ರೀತಿಯ ಹೀನ ಕೃತ್ಯಕ್ಕೆ ಕೈಜೋಡಿಸುತ್ತಿರುವವರನ್ನು ಪತ್ತೆ ಹಚ್ಚಲು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.
ಗದಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಧರ ಕುಲಕರ್ಣಿ, ಕೋಶಾಧ್ಯಕ್ಷ ಮಾರುತಿ ಪವಾರ, ಭಜರಂಗದಳ ಸಂಯೋಜಕ ಮುತ್ತು ಶಿಂಗಟಾಲಕೇರಿ, ಶಿವರಾಜ ಒಂಟೇಲಿ, ರವೀಂದ್ರನಾಥ ದೊಡ್ಡಮೇಟಿ, ಮುತ್ತು ಕಡಗದ, ಪ್ರವೀಣ ಕುಬಸದ ಮನವಿ ಪತ್ರ ನೀಡಿದರು.