ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಪ್ರಕಟಗೊಂಡ ವಿವಾದಾತ್ಮಕ ‘ವಚನ ದರ್ಶನ’ ಎಂಬ ಪುಸ್ತಕವು ಬಸವಾದಿ ಶಿವಶರಣರ ಆಶಯಗಳಿಗೆ, ವಚನ ಚಳುವಳಿಗೆ, ಶರಣರ ಕ್ರಾಂತಿಗಳಿಗೆ, ವಚನಸಾಹಿತ್ಯದ ಮೂಲ ಚಿಂತನೆಗಳಿಗೆ ಧಕ್ಕೆ ತರುವಂತಹ ವಿಚಾರಗಳುಳ್ಳ ಲೇಖನಗಳ ಸಂಗ್ರಹವಾಗಿದೆ. ಬಸವಾದಿ ಶರಣರ ಪರಂಪರೆಗೆ ಅಪಚಾರವೆಸಗುವ, ಉದ್ದೇಶಪೂರ್ವಕವಾಗಿ ಸದರಿ ಕೃತಿಯನ್ನು ಬರೆಯಲಾಗಿದೆ. ಆದ್ದರಿಂದ ಪ್ರಸ್ತುತ ಕೃತಿಯನ್ನು ಕೂಡಲೇ ನಿಷೇಧಿಸಬೇಕೆಂದು ಬಸವಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎಸ್. ಚೆಟ್ಟಿ, ಗದಗ ಬಸವ ಕೇಂದ್ರದ ಕಾರ್ಯದರ್ಶಿ ಎಸ್.ಎಂ. ಕವಳಿಕಾಯಿ, ಗದಗ ಬಸವದಳದ ಅಧ್ಯಕ್ಷ ವಿ.ಕೆ. ಕರೆಗೌಡರ, ಎನ್.ಎಚ್. ಹಿರೆಸಕ್ಕರಗೌಡರ, ಎಸ್.ಎನ್. ಹಕಾರಿ, ಶಿವನಗೌಡ ಗೌಡರ, ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರ, ಸಿದ್ದು ಅಂಗಡಿ, ಗದಗ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ್ ಅಸುಂಡಿ ಮುಂತಾದ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಮನವಿಯನ್ನು ಅರ್ಪಿಸಿದರು.
ಇದೇ ವಿಚಾರವಾಗಿ ಶಿವಾನಂದ ಮಠಕ್ಕೆ ಭೇಟಿ ನೀಡಿ, ವಚನ ದರ್ಶನ ಪುಸ್ತಕದ ಕುರಿತು ವಿವರವಾದ ಮನವಿಯನ್ನು ಪೂಜ್ಯ ಶ್ರೀ ಜಗದ್ಗುರುಗಳವರಿಗೆ ಸಲ್ಲಿಸಲಾಯಿತು.