ವಿಜಯಸಾಕ್ಷಿ ಸುದ್ದಿ, ಗದಗ : ಹಲವಾರು ದಶಕಗಳಿಂದ ಉತ್ತರ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳು ಮಠ-ಮಾನ್ಯಗಳು ಸರ್ಕಾರದಿಂದ ಅನುಮತಿ ಪಡೆದು ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿವೆ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಾಂಗ ಮಾಡಿ ಎಷ್ಟೋ ಜನರು ರಾಜಕಾರಣಿಗಳಾಗಿದ್ದಾರೆ. ವಿಪರ್ಯಾಸವೆಂದರೆ, ಇಷ್ಟು ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಶಿಕ್ಷಕರ ಕನಿಷ್ಠ ಬೇಡಿಕೆಗಳನ್ನಾದರೂ ಕೂಡಲೇ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಜಿಲ್ಲಾ ಘಟಕ ಗದಗ ಹಾಗೂ ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ವತಿಯಿಂದ ಸಚಿವ ಎಚ್.ಕೆ. ಪಾಟೀಲರ ಸಮ್ಮುಖದಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸುಮಾರು ನಾಲ್ಕು ದಶಕಗಳ ಕಾಲ ಹೋರಾಟ, ಮುಷ್ಕರ ಹಾಗೂ ಸಭೆಗಳ ಮುಖಾಂತರ ದಾಖಲೆಯನ್ನು ಸ್ಥಾಪಿಸಿರುವ ಬಸವರಾಜ ಹೊರಟ್ಟಿಯವರು ಹಲವಾರು ಸಭೆಗಳನ್ನು ಮಾಡಿ ಈಗಾಗಲೇ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ದಿಶೆಯಲ್ಲಿ ಆದಷ್ಟು ಬೇಗ ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಎಸ್.ವಿ. ಸಂಕನೂರ, ಶಿವಾನಂದ ಪವಾಡಶೆಟ್ಟಿ, ಪುನೀತ ಬೆನಕನವಾರಿ, ರವಿ ದಂಡಿನ, ಶ್ರೀನಿವಾಸ ಹುಯಿಲಗೋಳ, ಗದಗ ಜಿಲ್ಲಾ ಸಂಘದ ಅಧ್ಯಕ್ಷ ಎಮ್.ಕೆ. ಲಮಾಣಿ, ಎ.ಎಸ್. ಪಾಟೀಲ, ಆರ್.ಬಿ. ದಂಡಿನ, ಎಲ್.ಎಸ್. ಅರಳಹಳ್ಳಿ, ಎಮ್.ಸಿ. ಕಟ್ಟಿಮನಿ, ಬಿ.ಎಮ್. ಯರಗುಪ್ಪ, ಬಿಜ್ಜೂರ ಎಸ್.ಎಚ್, ಬಿ.ಸಿ. ಗುಳೇದ, ಝಡ್.ಎಮ್. ಖಾಜಿ, ಉಮೇಶ ಹಿರೇಮಠ, ಬಿ.ಎಮ್. ಜವಳಿ, ದಾನೇಶ ನಾಯಕ, ಬಸವರಾಜ ಕೊರ್ಲಹಳ್ಳಿ, ಆರ್.ಸಿ. ಶಿರೋಳ, , ಎಮ್.ಎಸ್. ಮಲ್ಲಾಪೂರ, ಬಿ.ಡಿ. ಯರಗೊಪ್ಪ, ಡಿ.ಎನ್. ಮರಡ್ಡಿ, ಪಿ.ಎನ್. ಹಿರೇಮಠ, ಟಿ.ಆರ್. ನಾಯಕ ಮುಂತಾದವರು ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳಾದ ಎನ್.ಪಿ.ಎಸ್. ರದ್ದುಗೊಳಿಸಿ ಓ.ಪಿ.ಎಸ್. ಜಾರಿಗೆ ತರುವುದು, ಅನುದಾನಿತ ಶಾಲಾ-ಕಾಲೇಜುಗಳಲ್ಲಿ 2015ರಿಂದ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡುವುದು, ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ಯೋಜನೆಯನ್ನು ಖಾಸಗಿ ಶಿಕ್ಷಕ ಸಿಬ್ಬಂದಿಯವರಿಗೆ ನೀಡುವುದು, ಕಾಲ್ಪನಿಕ ವೇತನ ಬಡ್ತಿಯನ್ನು ತಕ್ಷಣದಿಂದ ಜಾರಿಗೆ ತರುವುದು, 1995ರ ನಂತರ ಪ್ರಾರಂಭವಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವುದು, ಅನುಮೋದನೆಗೊಂಡ 93 ಚಿತ್ರಕಲಾ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸುವುದು, ಬೋಧಕೇತರ ಸಿಬ್ಬಂದಿಯನ್ನು ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ತುಂಬಿಕೊಳ್ಳಲು ಅನುಮತಿ ನೀಡುವುದು.